ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪತಿ, ಅತ್ತೆ-ಮಾವನ ಕಿರುಕುಳಕ್ಕೆ ನೊಂದ ಗೃಹಿಣಿ ಆತ್ಮಹತ್ಯೆಗೆ ಶರಣು

ಗದಗ: ಪತಿ, ಅತ್ತೆ ಹಾಗೂ ಮಾವನ ಕಿರುಕುಳಕ್ಕೆ ಮನನೊಂದು ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಜರುಗಿದೆ.

ಸುನೀತಾ ಪ್ರಮೋದ ಕಮ್ಮಾರ (30) ಎಂಬ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಧಾರವಾಡದ ಭಾರತಿ ಬಸವರಾಜ ಪತ್ತಾರ ಎಂಬುವರ ಮಗಳಾದ ಸುನಿತಾಳನ್ನು ಶಿಗ್ಲಿಯ ಪ್ರಮೋದ ನಿಂಬಣ್ಣ ಕಮ್ಮಾರ ಎಂಬ ಕೆಪಿಟಿಸಿಎಲ್ ಉದ್ಯೋಗಿಗೆ 2008ರಲ್ಲಿಯೇ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾದ ಕೆಲ ವರ್ಷಗಳ ನಂತರ ಗಂಡ ಪ್ರಮೋದ, ಅತ್ತೆ ಶಕುಂತಲಾ ಹಾಗೂ ಮಾವ ನಿಂಬಣ್ಣ ಕಮ್ಮಾರ ಅವರು ನಿತ್ಯ ಅವಳೊಂದಿಗೆ ವಿನಾಕಾರಣ ಜಗಳ ತೆಗೆಯುವುದು, ನೀನು ನಮ್ಮ ಮನೆಗೆ ಲಾಯಕ್ಕಿಲ್ಲ, ಏನಾದರೂ ಮಾಡಿಕೊಂಡು ಸಾಯಿ. ನಾವು ನಮ್ಮ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ನಿತ್ಯವೂ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಗೃಹಿಣಿ ಆ.1 ರ ಸೋಮವಾರ ಸಂಜೆ ಮನೆಯ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪುತ್ರಿ ಸಾವಿಗೆ ಗಂಡ, ಅತ್ತೆ ಮಾವನೇ ನೇರ ಕಾರಣ ಎಂದು ಸುನೀತಾರ ತಾಯಿ ಭಾರತಿ ಪತ್ತಾರ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ನಂತರ ಪ್ರಕರಣವನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಮಂಗಳವಾರ ಇಡೀ ದಿನ ಹೈಡ್ರಾಮಾ ನಡೆಯಿತು. ಆದರೆ ಮೃತಳ ಸಹೋದರ ಸೈನಿಕನಾಗಿದ್ದು ಅವರ ದಿಟ್ಟ ನಿಲುವಿನಿಂದ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮೂರು ಜನರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Edited By : Vijay Kumar
PublicNext

PublicNext

03/08/2022 01:45 pm

Cinque Terre

52.88 K

Cinque Terre

3