ಕಲಬುರಗಿ: ಪ್ರೀತಿಸಿ ಮದುವೆಯಾದ ಪತ್ನಿ ಮತ್ತೊಬ್ಬನ ಜತೆ ಓಡಿ ಹೋದಳೆಂಬ ಸಿಟ್ಟಿನಲ್ಲಿ ವ್ಯಕ್ತಿಯೋರ್ವ ತನ್ನ ಇಬ್ಬರು ಹೆಣ್ಣು ಮಕ್ಕಳನ್ನೇ ಕೊಲೆಗೈದು ಶವಗಳನ್ನು ಆಟೋದಲ್ಲೇ ಇಟ್ಟುಕೊಂಡು ದಿನವಿಡೀ ತಿರುಗಾಡಿರುವ ಘಟನೆ ಕಲಬುರಗಿಯ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜೀವಗಾಂಧಿ ನಗರ ಬಡಾವಣೆಯ ನಿವಾಸಿ ಲಕ್ಷ್ಮೀಕಾಂತ್ ಎಂಬಾತನೇ ಮಕ್ಕಳನ್ನು ಕೊಂದ ಪಾಪಿ ತಂದೆ. ಸೋನಿ (11) ಹಾಗೂ ಮಯೂರಾ (10) ಕೊಲೆಯಾದ ಮಕ್ಕಳು. ಆಟೋ ಚಾಲಕನಾದ ಲಕ್ಷ್ಮೀಕಾಂತ್ ಹಾಗೂ ಅಂಜಲಿ ಎಂಬ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರ ಸುಖಸಂಸಾರಕ್ಕೆ ಸಾಕ್ಷಿಯಾಗಿ ನಾಲ್ಕು ಜನ ಮಕ್ಕಳ ಸಹ ಇದ್ದಾರೆ.
ಆದರೆ ಲಕ್ಷ್ಮಿಕಾಂತ್ ಪತ್ನಿ ಪರ ಪುರುಷನೊಂದಿಗೆ ಮನೆ ಬಿಟ್ಟು ಹೋಗಿದ್ದಳು. ಇದರಿಂದಾಗಿ ತನ್ನ ನಾಲ್ಕು ಮಕ್ಕಳ್ನನು ಅಜ್ಜಿಯ ಮನೆಗೆ ಕಳಿಸಿದ್ದ. ವಾರದ ಬಳಿಕ ಮೊನ್ನೆಯಷ್ಟೇ ಸೋನಿ ಮತ್ತು ಮಯೂರಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಭಾನುವಾರ, ಸೋಮವಾರ ಎರಡೂ ದಿನ ಮಕ್ಕಳನ್ನು ದಿನವಿಡೀ ಅಟೋದಲ್ಲಿ ಊರು ಸುತ್ತಿಸಿ ಬೇಡಿದ್ದೆಲ್ಲ ಕೊಡಿಸಿದ್ದ. ಮಂಗಳವಾರ ಸಂಜೆ ಇಬ್ಬರು ಮಕ್ಕಳನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಬಳಿಕ ಶವನ್ನು ಬುಧವಾರ ಬೆಳಗ್ಗೆಯಿಂದ ಆಟೋದಲ್ಲಿ ತೆಗೆದುಕೊಂಡು ತಿರುಗಿದ್ದಾನೆ.
ಹೀಗೆ ಓಡಾಡಿ ಒಂದೆಡೆ ನಿಂತಾಗ ಆಟೋದಿಂದ ದುರ್ವಾಸನೆ ಬಂದಿದೆ. ಅಲ್ಲದೇ, ರಕ್ತದ ಕಲೆಗಳು ಕೂಡ ಸಾರ್ವಜನಿಕರ ಕಣ್ಣಿಗೆ ಬಿದ್ದಿವೆ. ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಟೋ ಪರಿಶೀಲನೆ ನಡೆಸಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ. ನಂತರ ಲಕ್ಷ್ಮೀಕಾಂತ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮಕ್ಕಳನ್ನು ತಾನೇ ಕೊಲೆಗೈದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
PublicNext
29/06/2022 10:21 pm