ಮುಂಬೈ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಹೈಸಾಲ್ ಗ್ರಾಮದಲ್ಲಿ ಸೋಮವಾರ ಒಂದೇ ಕುಟುಂಬದ ಒಂಬತ್ತು ಜನರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಗ್ಲಿ ಪೊಲೀಸರ ಪ್ರಕಾರ, ಘಟನೆಯ ಬಗ್ಗೆ ಸೋಮವಾರ ಮಧ್ಯಾಹ್ನ 1:30ರ ಮಾಹಿತಿ ಲಭ್ಯವಾಗಿದೆ. ಮಾಣಿಕ್ ವಾನ್ಮೋರ್ (49), ಮಾಣಿಕ್ ಅವರ ಪತ್ನಿ ರೇಖಾ (54), ಮಗಳು ಅನಿತಾ (28), ಮಗ ಆದಿತ್ಯ (15), ಮಾಣಿಕ್ ಸಹೋದರ ಪೋಪಟ್ ವಾನ್ಮೋರ್ (52), ಪೋಪಟ್ ಅವರ ಪತ್ನಿ ಸಂಗೀತಾ (48), ಮಗಳು ಅರ್ಚನಾ (30), ಮಗ ಶುಭಂ (28) ಮತ್ತು ಮಾಣಿಕ್ ಮತ್ತು ಪೋಪಟ್ ಅವರ ತಾಯಿ ಅಕ್ಕತಾಯಿ (72) ಶವವಾಗಿ ಪತ್ತೆಯಾದವರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾಂಗ್ಲಿ ಎಸ್‌ಪಿ ದೀಕ್ಷಿತ್ ಗೆಡಮ್, "ನಾವು ಒಂದೇ ಮನೆಯಲ್ಲಿ ಒಂಬತ್ತು ಜನರ ಶವಗಳನ್ನು ಕಂಡುಕೊಂಡಿದ್ದೇವೆ. ಮೂವರ ಶವಗಳು ಒಂದೇ ಸ್ಥಳದಲ್ಲಿ ಪತ್ತೆಯಾದರೆ, ಆರು ಜನರ ಶವ ಮನೆಯ ಬೇರೆ ಬೇರೆ ಸ್ಥಳಗಳಲ್ಲಿ ಪತ್ತೆಯಾಗಿದೆ" ಎಂದು ತಿಳಿಸಿದ್ದಾರೆ.
PublicNext
21/06/2022 10:13 am