ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ ಎಂಬ ಸತ್ಯ ಹೊರ ಬಿದ್ದಿದೆ. ಬ್ಯಾಡರಹಳ್ಳಿ ಬಿಜೆಪಿ ಮುಖಂಡ ಬಾಳಲ್ಲಿ ಚೆಲ್ಲಾಡಿದ ಆ ಲೇಡಿ ಮತ್ತು ಗ್ಯಾಂಗ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಿಜೆಪಿ ಮುಖಂಡ ಅನಂತರಾಜು ಕಳೆದ ೧೩ರಂದು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಮೊದಲಿಗೆ ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಸದ್ಯ ಅನಂತರಾಜು ಬರೆದಿಟ್ಟ ಡೆತ್ ನೋಟ್ ಸಿಕ್ಕಿದ್ದು ಸಾವಿಗೆ ಅಸಲಿ ಕಾರಣ ಬಯಲಾಗಿದೆ.
ಅನಂತರಾಜು ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಡಿಮ್ಯಾಂಡ್ ಗ್ಯಾಂಗ್ ಇರುವುದು ಗೊತ್ತಾಗಿದೆ. ಹೀಗಾಗಿ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೆ.ಆರ್.ಪುರಂ ನಿವಾಸಿ ರೇಖಾ ಎಂಬಾಕೆ ಹನಿಟ್ರ್ಯಾಪ್ ಮಾಡಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಈಕೆಯ ಜೊತೆ ವಿನೋದ್ ಮತ್ತು ಸ್ಪಂದನ ಮೇಲೂ ಎಫ್ಐಆರ್ ದಾಖಲಾಗಿದೆ.
ಮಹಿಳೆಯ ಬ್ಲಾಕ್ ಮೇಲ್‌ನಿಂದ ಹೊರಬರಲಾಗದೆ ಅನಂತರಾಜು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅನಂತರಾಜು ಬರೆದಿಟ್ಟ ಡೆತ್ ನೋಟ್‌ನಲ್ಲಿ ಆಕೆಯ ಹೆಸರು ಉಲ್ಲೇಖಿಸಿದ್ದಾರೆ. ಅನಂತರಾಜು ಜೊತೆ ಇದ್ದ ಖಾಸಗಿ ವಿಡಿಯೋ, ಫೋಟೊ ಇಟ್ಟುಕೊಂಡು ಸಾಕಷ್ಟು ಹಣ ಪಡೆದು ಮತ್ತೆ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಹಣ ಕೊಡದಿದ್ರೆ ಬಿಜೆಪಿ ವರಿಷ್ಟರಿಗೆ ನೀಡಿ ಮರ್ಯಾದೆ ಕಳೆಯೋದಾಗಿ ಬ್ಲಾಕ್‌ಮೇಲ್ ಮಾಡಿರೋ ಆರೋಪ ಕೇಳಿ ಬಂದಿದೆ. ಇನ್ನು ಡೆತ್‌ನೋಟ್‌ನಲ್ಲಿ ಅನಂತರಾಜು ಪತ್ನಿಗೆ ಕ್ಷಮೆ ಕೇಳಿದ್ದಾರೆ. ಡೆತ್‌ನೋಟ್ ಆಧಾರದ ಮೇಲೆ ಬ್ಯಾಡರಹಳ್ಳಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಹಾಗೂ ತಲೆ ಮರೆಸಿಕೊಂಡಿರುವ ಹನಿಟ್ರ್ಯಾಪ್ ಗ್ಯಾಂಗ್ ಪತ್ತೆಗಾಗಿ ಬಲೆ ಬೀಸಿದ್ದಾರೆ.
PublicNext
16/05/2022 01:03 pm