ಪಾಟ್ನಾ: ಬಿಹಾರ ರಾಜಧಾನಿಯ ಕೃಷ್ಣನಗರ ಪ್ರದೇಶದಲ್ಲಿ 28 ವರ್ಷದ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತೆಯು ಜಹಾನಾಬಾದ್ ಜಿಲ್ಲೆಯ ನಿವಾಸಿಯಾಗಿದ್ದು, ಮದುವೆ, ಜನ್ಮದಿನಾಚರಣೆ ಸೇರಿದಂತೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಗಾಯನ ಗೋಷ್ಠಿಗಳನ್ನು ನಡೆಸಿಕೊಡುತ್ತಿದ್ದರು. 'ಆರೋಪಿಗಳಾದ ಪಿಂಟು ಕುಮಾರ್, ಸಂಜೀವ್ ಕುಮಾರ್ ಹಾಗೂ ಕರು ಕುಮಾರ್ ಮದುವೆ ಸಮಾರಂಭದಲ್ಲಿ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳಿಕೊಂಡಿದ್ದರು. ಆರೋಪಿಗಳ ಕೋರಿಕೆಯಂತೆ ಕಾರ್ಯಕ್ರಮ ನಡೆಸಿಕೊಡಲು ಅವರು ಹೇಳಿದ ಸ್ಥಳಕ್ಕೆ ತೆರಳಿದಾಗ ಆಘಾತವಾಯಿತು. ಅಲ್ಲಿ ಅಂಥ ಯಾವುದೇ ಸಮಾರಂಭ ಇರಲಿಲ್ಲ. ಈ ಕುರಿತು ವಿಚಾರಿಸಿದಾಗ ನನ್ನನ್ನು ಕೊಠಡಿಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ' ಎಂದು ಸಂತ್ರಸ್ತ ಗಾಯಕಿ ದೂರಿದ್ದಾರೆ.
'ಹೇಗೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಮತ್ತೊಂದು ಕೊಠಡಿಗೆ ತೆರಳಿ ಲಾಕ್ ಮಾಡಿಕೊಂಡೆ. ಕೂಡಲೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದೆ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ನಾವು ತಕ್ಷಣವೇ ಸ್ಥಳಕ್ಕೆ ತೆರಳಿ ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದೇವೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಐಪಿಸಿಯ 376 ಡಿ (ಗ್ಯಾಂಗ್ ರೇಪ್) ಮತ್ತು 34 (ಕ್ರಿಮಿನಲ್ ಪಿತೂರಿ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೃಷ್ಣನಗರ ಪೊಲೀಸ್ ಠಾಣಾಧಿಕಾರಿ ರವಿ ರಂಜನ್ ತಿಳಿಸಿದ್ದಾರೆ.
PublicNext
08/05/2022 11:54 am