ದಾವಣಗೆರೆ: ಮರಳು ವ್ಯಾಪಾರಸ್ಥರಿಂದ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ದಾವಣಗೆರೆ ಡಿಸಿಆರ್ ಬಿ ಡಿವೈಎಸ್ಪಿ ಬಿ ಎಸ್ ಬಸವರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಮೈಸೂರಿನ ಇಮ್ರಾನ್ ಸಿದ್ಧಿಕಿ, ಚಿತ್ರದುರ್ಗದ ಅಶೋಕ್ ಅಲಿಯಾಸ್ ಜಿಮ್ಮಿ ಬಂಧಿತ ಆರೋಪಿಗಳಾಗಿದ್ದು, ಇವರಿಂದ 75.70 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಈ ಇಬ್ಬರು ದಾವಣಗೆರೆಯ ಮರಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದರು.ನಗರದ ಮರಳು ವ್ಯಾಪಾರಿ ಮುಬಾರಕ್ ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪ್ರತಿ ತಿಂಗಳು 4 ಲಕ್ಷ ರೂಪಾಯಿ ಹಣವನ್ನ ನೀಡಬೇಕು, ಇಲ್ಲದಿದ್ದರೆ ಹೇಗೆ ದಂಧೆ ಮಾಡುತ್ತೀಯಾ ಎಂದು ಬೆದರಿಕೆ ಹಾಕಿದ್ದರು.
ಈ ಬಗ್ಗೆ ಮುಬಾರಕ್ ಡಿಸಿಆರ್ ಬಿ ಘಟಕಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಡಿವೈಎಸ್ಪಿ ಬಿ ಎಸ್. ಬಸವರಾಜ್ ನೇತೃತ್ವದ ತಂಡ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಮತ್ತೆ ತನಿಖೆ ಮುಂದುವರಿಸಿರುವ ಪೊಲೀಸರು ಹೆಚ್ಚಿಮ ಮಾಹಿತಿ ಕಲೆ ಹಾಕುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಮರಳು ದಂಧೆ ಹಾಗೂ ವಸೂಲಿಕೋರರ ಹಾವಳಿಯೂ ಹೆಚ್ಚಾಗಿದೆ.
PublicNext
03/05/2022 03:20 pm