ದಾವಣಗೆರೆ: ನಗರದ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಕಳವಾಗಿ 19 ದಿನ ಕಳೆದರೂ ಪತ್ತೆಯಾಗಿಲ್ಲ. ಇಲ್ಲಿವರೆಗೆ ಆರೋಪಿಗಳನ್ನೂ ಪತ್ತೆ ಹಚ್ಚಲಾಗಿಲ್ಲ. ಮುಂದಿನ ಹತ್ತು ದಿನಗಳೊಳಗಾಗಿ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸದಿದ್ದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ಮಾ.16 ರಂದು ಸಂಜೆ 6.18ಕ್ಕೆ ಹರಪನಹಳ್ಳಿ ಪಟ್ಟಣದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗೆ ಗಂಡು ಶಿಶುವಿನ ಜನನವಾಗಿತ್ತು. ಮಗುವಿಗೆ ಉಸಿರಾಟದ ತೊಂದರೆ ಆಗಿತ್ತು ಎಂದು ಮಕ್ಕಳ ತೀವ್ರ ನಿಗಾ ಘಟಕದಲ್ಲಿಡಲಾಗಿತ್ತು. 2 ಗಂಟೆ ಬಳಿಕ ಶಿಶು ನೀಡುವಾಗ ತಾಯಿ ಕಾರ್ಡ್ ತರುವಂತೆ ತಿಳಿಸಲಾಗಿತ್ತು. ಅದರಂತೆ ಇಸ್ಮಾಯಿಲ್ , ತಾಯಿ ಕಾರ್ಡ್ ತರಲು ಹೋದಾಗ ಅಪರಿಚಿತ ಮಹಿಳೆಗೆ ಮಗು ನೀಡಲಾಗಿತ್ತು. ಆದ್ರೆ, ಮಹಿಳೆ ಮಗುವಿನ ಜೊತೆ ಪರಾರಿಯಾಗಿದ್ದಾಳೆ ಎಂದು
ಸಂಚಾಲಕ ಟಿ.ಅಸ್ಗರ್ ಹೇಳಿದ್ದಾರೆ.
ಕೂಡಲೇ ಪೊಲೀಸರಿಗೆ ದೂರು ನೀಡಲು ತೆರಳಿದಾಗ 8 ತಾಸು ವಿಳಂಬ ಮಾಡಲಾಯಿತು. ಶಿಶು ಕಳವು ಮಾಡಿದ ಅಪರಿಚಿತ ಮಹಿಳೆಯ ದೃಶ್ಯಾವಳಿ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದರೆ, ಸರಿಯಾಗಿ ಸಿಸಿ ಕ್ಯಾಮೆರಾ ಅಳವಡಿಸದ ಕಾರಣ ಮಗು ಅಪಹರಣ ಮಾಡಿದ ಮಹಿಳೆಯ ದೃಶ್ಯ ಸರಿಯಾಗಿ ಕಾಣುತ್ತಿಲ್ಲ. ಸ್ಮಾರ್ಟ್ ಸಿಟಿ ದಾವಣಗೆರೆಯಲ್ಲಿ ಸಿಸಿ ಕ್ಯಾಮೆರಾ ಕೆಲಸ ಮಾಡುತ್ತಿಲ್ಲ. ಶಿಶು ಕಳವಾದ ಕೂಡಲೇ ದೂರು ದಾಖಲಿಸಿಕೊಂಡಿದ್ದರೆ ಅಪರಾಧಿಗಳು ಜೈಲು ಸೇರುತ್ತಿದ್ದರು. ಆದರೆ, ಪೊಲೀಸರ ನಿರ್ಲಕ್ಷ್ಯದಿಂದ 19 ದಿನ ಕಳೆದರೂ ಮಗು ಪತ್ತೆಯಾಗಿಲ್ಲ ಎಂದು ಆರೋಪಿಸಲಾಗಿದೆ.
PublicNext
03/04/2022 05:46 pm