ವಿಜಯನಗರ: ಹೂವಿನಹಡಗಲಿ ತಾಲ್ಲೂಕು ಕಚೇರಿ ಬಳಿಯಲ್ಲಿನ ತಮ್ಮ ತುಂಡು ಜಮೀನಿನ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿ, ವಾರದ ಹಿಂದೆ ಕಾಣೆಯಾಗಿದ್ದ ರೈತ ನಂದಿಹಳ್ಳಿ ಮಲ್ಲಪ್ಪ ಬಣಕಾರ (49)ಯು ಶವವಾಗಿ ಭಾನುವಾರ ಪತ್ತೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ರೈತ ಮಲ್ಲಪ್ಪ ತನ್ನ 2-22 ಎಕರೆ ಜಮೀನಿನ ಪೈಕಿ ಎರಡು ಎಕರೆಯನ್ನು 2006ರಲ್ಲಿ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಮಾರಾಟ ಮಾಡಿದ್ದರು. ಆದರೆ, ಇಡೀ ವಿಸ್ತೀರ್ಣ ಭೂಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿತ್ತು. 22 ಸೆಂಟ್ಸ್ ತುಂಡು ಭೂಮಿಯ ಭೂಸ್ವಾಧೀನ ರದ್ದುಪಡಿಸಿ, ತಮ್ಮ ಹಕ್ಕಿಗೆ ಒಪ್ಪಿಸುವಂತೆ ಸುದೀರ್ಘ ಹೋರಾಟ ನಡೆಸಿದ್ದರು. ಕಾನೂನು ಬಾಹಿರ ಭೂಸ್ವಾಧೀನ, ಅಕ್ರಮ ವಸತಿ ವಿನ್ಯಾಸದಿಂದ ತಮಗೆ ಅನ್ಯಾಯವಾಗಿದೆ ಎಂದು ಮಲ್ಲಪ್ಪ ಈಚೆಗೆ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಜ. 30 ರಂದು ಅವರು ಕಾಣೆಯಾಗಿದ್ದರು. ಆದರೆ ತಾಲ್ಲೂಕು ಕಚೇರಿ ಹಿಂಭಾಗದ ತಮ್ಮ ಜಮೀನಿನ ಪಕ್ಕದ ಜಾಲಿಯ ಪೊದೆಯಲ್ಲಿ ಮಲ್ಲಪ್ಪನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಕ್ಕದಲ್ಲಿ ವಿಷದ ಬಾಟಲಿ ದೊರೆತಿರುವುದರಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೇಔಟ್ ಮಾಲೀಕ ಹಾಗೂ ಏಳು ಮಂದಿ ಅಧಿಕಾರಿಗಳ ಮೇಲೆ ಕೇಸ್ ದಾಖಲಾಗಿದೆ. ರೈತ ಮಲ್ಲಪ್ಪನ ಪತ್ನಿ ಸರಸ್ವತಿ ಹೂವಿನ ಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲೇಔಟ್ ಮಾಲೀಕ ಪಿ. ವಿಶ್ವನಾಥ (A1), ಹಗಡಲಿ ಪುರಸಭೆ ಮುಖ್ಯಧಿಕಾರಿ ನಾಸೀರ್ ಭಾಷಾ (A2), ಪುರಸಭೆ ಇಂಜಿನಿಯರ್ ಸಿದ್ದಯ್ಯ(A3), ಪುರಸಭೆ ಎಫ್‌ಡಿಸಿ ರಾಮುಮೂರ್ತಿ(A4), ಸರ್ವೇ ಇಲಾಖೆ ಸೂಪರ್ವೈಸರ್ ಕೌಸರ್(A5), ಹಡಗಲಿ ಸಹಾಯಕ ಭೂ ದಾಖಲೆಯ ನಿರ್ದೇಶಕ ಹಂಸಕುಮಾರಿ (A6), ತಾಲೂಕು ಸರ್ವೇಯರ್ ಸ್ವರೂಪ್ ಭೂಷನ್ (A7) ಸೇರಿದಂತೆ 07 ಮಂದಿ ವಿರುದ್ಧ ದೂರು ದಾಖಲಾಗಿದೆ.
ಜಮೀನು ಪರಿಹಾರಕ್ಕಾಗಿ ಹೋರಾಟ ಮಾಡಿದ್ದ ರೈತ ಮಲ್ಲಪ್ಪ ಜನವರಿ 30 ರಂದು ನಾಪತ್ತೆಯಾಗಿದ್ದರು. ಗಂಡನ ಸಾವಿನ ಹಿಂದೆ ಅನುಮಾನವಿದೆ. 7 ಜನರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಗಂಡನ ಸಾವಿಗೆ ಲೇಔಟ್ ಮಾಲೀಕ ಹಾಗೂ 6 ಜನ ಅಧಿಕಾರಗಳು ಕಾರಣ ಎಂದು ಸರಸ್ವತಿ ಆರೋಪಿದ್ದಾರೆ.
PublicNext
07/02/2022 07:35 pm