ವಿಜಯಪುರ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಮೇಲೆ ಜೀಪ್ ಹತ್ತಿಸಿ ಕೊಲೆ ಮಾಡಿದ ಘಟನೆ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ನಡೆದಿದೆ.
ಶೋಭಾ ಸೋಮನಿಂಗ ಮೋಗದರೆ ಕೊಲೆಯಾದ ಮಹಿಳೆ. ಸಾಗರ ಖತಾರ ಹಾಗೂ ಮಾರುತಿ ಥೋರತ ಕೊಲೆ ಮಾಡಿದ ಪಾಪಿಗಳು. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಆರೋಪಿಗಳು ಕೃತ್ಯ ಎಸಗಿದ್ದಾರೆ.
ಸಾಗರ ಹಾಗೂ ಮಾರುತಿ ಕಬ್ಬು ಕಟಾವು ಮಾಡಲು ಜನರನ್ನು ತರುತ್ತೇವೆ ಎಂದು ಕೊಲೆಯಾದ ಮಹಿಳೆ ಶೋಭಾ ಪತಿ ಸೋಮನಿಂಗ ಅವರಿಂದ 45 ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಹಣ ಪಡೆದ ಬಳಿಕ ಕಬ್ಬು ಕಟಾವು ಮಾಡಲು ಯಾವುದೇ ಕೆಲಸಗಾರರನ್ನು ಕಳಿಸಿರಲಿಲ್ಲವಂತೆ. ಈ ವೇಳೆ ಕೊಟ್ಟ ಹಣ ವಾಪಸ್ ಮರಳಿಸುವಂತೆ ಸೋಮನಿಂಗ ಕೇಳಿದ್ದಾರೆ. ಇದೇ ವಿಚಾರಕ್ಕೆ ಆರೋಪಿಗಳಿಗೂ ಶೋಭಾಗೂ ವಾಗ್ವಾದ ನಡೆದಿದೆ. ಪರಿಣಾಮ ಕೋಪಗೊಂಡ ಪಾಪಿಗಳು ಶೋಭಾ ಅವರ ಮೇಲೆ ಜೀಪ್ ಹತ್ತಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
04/02/2022 07:48 pm