ಬೆಂಗಳೂರು: ಪತ್ನಿಯ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ!
ಮೃತ ಆರೋಪಿ ಶಕ್ತಿವೇಲು (22) ಒಂದೂವರೆ ವರ್ಷದ ಹಿಂದೆ ಸಂಗೀತ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಬಳಿಕ ದಂಪತಿ ಆನಂದಪುರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪತಿಯ ಕಿರುಕುಳಕ್ಕೆ ಬೇಸತ್ತ ಸಂಗೀತಾ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಳು. ಸಂಗೀತಾ ಕುಟುಂಬಸ್ಥರು ಶಕ್ತಿವೇಲು ವಿರುದ್ಧ ಕೆ.ಆರ್. ಪುರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ಶಕ್ತಿವೇಲುನನ್ನು ಬಂಧಿಸಲಾಗಿತ್ತು.
ಆದರೆ, ಇಂದು ಮುಂಜಾನೆ 6ರ ಸಮಯದಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕು ಎಂದಿದ್ದರಿಂದ ಆರೋಪಿಯನ್ನು ಶೌಚಗೃಹಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ಪಕ್ಕಕ್ಕೆ ತಳ್ಳಿ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ ಶಕ್ತಿವೇಲುನನ್ನು ಬಂಧಿಸಲು ಪೊಲೀಸರು ಹಿಂಬಾಲಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹೀಗೆ ಪರಾರಿಯಾದ ಶಕ್ತಿವೇಲು, ಐಟಿಐ ಬಳಿಯ ಸ್ಕೈ ವಾಕ್ ಮೇಲಿಂದ ಹಾರಿ ಕೆಳಗೆ ಬಿದ್ದಿದ್ದ. ಅದೇ ಸಮಯಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆ ಈ ಘಟನೆ ಸಂಬಂಧ ಆರೋಪಿ ತಪ್ಪಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿ.ವಿ.ಯಲ್ಲಿ ಸೆರೆಯಾಗಿದ್ದು, ಈ ಪ್ರಕರಣ ಹಲವು ಅನುಮಾನಗಳಿಗೂ ಕಾರಣವಾಗಿದೆ. ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲಿದೆ.
PublicNext
21/12/2021 10:28 am