ದೊಡ್ಡಬಳ್ಳಾಪುರ: ಲಾರಿಗಳ ಸಾಮರ್ಥ್ಯಕ್ಕೂ ಹೆಚ್ಚು ಎಂ ಸ್ಯಾಂಡ್ ತುಂಬಿ ಮತ್ತು ಪರ್ಮಿಟ್ ಇಲ್ಲದೆ ಟನ್ ಗಟ್ಟಲೆ ಜಲ್ಲಿಕಲ್ಲು ಮತ್ತು ಎಂ ಸ್ಯಾಂಡ್ ಸಾಗಾಟ ಮಾಡುತ್ತಿದ್ದ 5 ಲಾರಿಗಳನ್ನು ತಡೆದ ಗ್ರಾಮಸ್ಥರು ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಹಳೆಕೋಟೆ ತಾಲೂಕಿನ ಸರ್ವೆ ನಂಬರ್ 6ರಲ್ಲಿ ಮೂರು ಕ್ರಷರ್ ಗಳು ಕಲ್ಲು ಗಣಿಗಾರಿಕೆ ನಡೆಸುತ್ತಿವೆ. ಈ ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪರಿಸರ ಹಾಳಾಗಿದ್ದು, ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಡುವೆ ಕ್ರಷರ್ ನಿಂದ ಜಲ್ಲಿ ಕಲ್ಲು, ಎಂ ಸ್ಯಾಂಡ್ ಸಾಗಾಟ ಮಾಡುವ ಕ್ರಷರ್ ಲಾರಿಗಳು ಸರ್ಕಾರಿ ನಿಯಮ ಉಲ್ಲಂಘಿಸುತ್ತಿವೆ.
IRC-72 ನಿಯಮ ಪ್ರಕಾರ 6 ವೀಲ್ ಲಾರಿ 18.5 ಟನ್ ಮತ್ತು 10 ವೀಲ್ ಲಾರಿ 28 ಟನ್ ಮಾತ್ರ ಎಂ ಸ್ಯಾಂಡ್ ಸಾಗಾಟ ಮಾಡಬೇಕು ಮತ್ತು ಕ್ರಷರ್ ಬಳಿಯೇ ವೇವ್ ಬ್ರಿಡ್ಜ್ ಇದ್ದು ಅಲ್ಲಿಯೇ ತೂಕ ಮಾಡಬೇಕು. ಆದರೆ, ಇದ್ಯಾವುದೇ ನಿಯಮ ಪಾಲಿಸದ ಲಾರಿಗಳು 30ರಿಂದ 35 ಟನ್ ಎಂ ಸ್ಯಾಂಡ್ ಸಾಗಿಸುತ್ತಿವೆ! ಕ್ರಷರ್ ಬಳಿಯ ವೇವ್ ಬ್ರಿಡ್ಜ್ ನಲ್ಲಿ ತೂಕ ಮಾಡದೆ ಪರ್ಮಿಟ್ ಪಡೆಯುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನವನ್ನೂ ವಂಚಿಸುತ್ತಿದ್ದಾರೆ. ಈ ವಂಚನೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಎಂಬವರು ದೂರು ನೀಡಿದರೂ ಗಣಿ ಇಲಾಖೆ ಕ್ಯಾರೇ ಮಾಡಿಲ್ಲ!
PublicNext
04/12/2021 11:57 am