ಹೈದರಾಬಾದ್: 10 ಸಾವಿರ ರೂಪಾಯಿ ನೀಡಲಿಲ್ಲ ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ನೆರೆಹೊರೆಯವರ ವಿರುದ್ಧವೇ ಸಾಮೂಹಿಕ ಅತ್ಯಾಚಾರದ ಸುಳ್ಳು ದೂರು ದಾಖಲಿಸಿದ ಘಟನೆ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ.
ದೂರು ನೀಡಿದ ಮಹಿಳೆ ಗೋಲ್ಕೊಂಡಾ ಪ್ರದೇಶದ ನಿವಾಸಿಯಾಗಿದ್ದಾಳೆ. ಆಕೆ ಪತಿಯಿಂದ ವಿಚ್ಛೇದನ ಪಡೆದು, ಮನೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಎರಡು ದಿನಗಳ ಹಿಂದೆ ಮಹಿಳೆಯು ಗೋಲ್ಕೊಂಡಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. "ನಾನು ವಾಸವಿರುವ ಪ್ರದೇಶದ ಕಿರಾಣಿ ಅಂಗಡಿ ಮಾಲೀಕ ಹಾಗೂ ಆತನ ಇಬ್ಬರು ಸ್ನೇಹಿತರು ಒಂದು ತಿಂಗಳ ಹಿಂದೆ ಶಾಹೀನ್‌ನಗರದಲ್ಲಿರುವ ಮನೆ ಬಾಡಿಗೆಗೆ ತೋರಿಸಲು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಕಾರಿನಲ್ಲೇ ಕಟ್ಟಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ" ಎಂದು ಮಹಿಳೆ ದೂರು ನೀಡಿದ್ದಳು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಆಘಾತಕಾರಿ ವಿಚಾರವೇ ಹೊರ ಬಿದ್ದಿದೆ. ಮಹಿಳೆಯ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಮಹಿಳೆಯು, ನೆರೆಹೊರೆಯವರು ವೈದ್ಯಕೀಯ ಚಿಕಿತ್ಸೆಗಾಗಿ 10,000 ರೂ. ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ.
PublicNext
08/11/2021 05:40 pm