ಪಶ್ಚಿಮ ಬಂಗಾಳದ ಬಿಜೆಪಿ ಯುವ ಮೋರ್ಚಾದ ನಾಯಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಶ್ಚಿಮಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯ ಇಟಾಹಾರ್ನ ಬಿಜೆಪಿ ಯುವ ನಾಯಕ ಮಿಥುನ್ ಘೋಷ್ ಮೃತ ದುರ್ದೈವಿ.
ರಾಜ್ಗ್ರಾಮ ಹಳ್ಳಿಯಲ್ಲಿರುವ ತಮ್ಮ ಮನೆ ಎದುರು ಭಾನುವಾರ ರಾತ್ರಿ 11 ಗಂಟೆಗೆ ಘೋಷ್ ಹೊರಗೆ ನಿಂತಿದ್ದರು. ಬೈಕ್ನಲ್ಲಿ ಬಂದ ಆಗಂತುಕರು ಮಿಥುನ್ ಹೊಟ್ಟೆಗೆ ಗುಂಡು ಹೊಡೆದಿದ್ದಾರೆ, ಕೂಡಲೇ ಸ್ಥಳೀಯರು ಸಮೀಪದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ.
ಈ ಕೃತ್ಯ ಟಿಎಂಸಿ ಕಾರ್ಯಕರ್ತರದ್ದೇ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ಸುವೇಂದು ಟ್ವೀಟ್ ಮಾಡಿ, ಮಿಥುನ್ ಘೋಷ್ ಅವರು ಬಿಜೆಪಿ ಯುವ ಮೋರ್ಚಾದ ಉತ್ತರ ದಿನಾಜ್ಪುರ ಜಿಲ್ಲೆಯ ಉಪಾಧ್ಯಕ್ಷರಾಗಿದ್ದರು. ಇಟಾಹಾರ್ನಲ್ಲಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇದರಲ್ಲಿ ಖಂಡಿತ ಟಿಎಂಸಿ ಕೈವಾಡವಿದೆ. ಅವರು ತಮ್ಮ ಯಜಮಾನನ ಅಣತಿಗೆ ಅನುಸಾರವಾಗಿ ಇಂಥ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಟಿಎಂಸಿ ಇಟಾಹಾರ್ ಶಾಸಕ ಮೊಹಾರಾಫ್ ಹುಸ್ಸೇನ್, ನಮ್ಮ ತೃಣಮೂಲ ಕಾಂಗ್ರೆಸ್ಗೂ, ಮಿಥುನ್ ಘೋಷ್ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಬೇರೆ ಯಾರಾದರೂ, ಇನ್ಯಾವುದೇ ದ್ವೇಷದ ಕಾರಣಕ್ಕೆ ಈ ಹತ್ಯೆ ಮಾಡಿಬಹುದು. ಪೊಲೀಸರ ತನಿಖೆಯಿಂದ ಸತ್ಯ ಹೊರಬರುತ್ತದೆ ಎಂದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಹಲವು ಬಾರಿ ಮಿಥುನ್ ಅವರ ಮೇಲೆ ಹಲ್ಲೆ ಪ್ರಯತ್ನವೂ ಆಗಿತ್ತು. ಪೊಲೀಸರಿಗೆ ಈ ಬಗ್ಗೆ ದೂರು ಕೂಡ ನೀಡಿದ್ದೇವೆ ಆದರೂ ಪೊಲಿಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಉತ್ತರ ದಿನಾಜ್ಪುರ ಬಿಜೆಪಿ ಅಧ್ಯಕ್ಷ ವಸುದೇವ್ ಸರ್ಕಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
PublicNext
18/10/2021 07:56 pm