ಬೆಂಗಳೂರು: ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಕೇಸರಿ ಶಾಲು, ಬಿಳಿಟೊಪ್ಪಿ, ಕುರ್ತಾ ತೊಟ್ಟು ಆಯುಧಪೂಜೆ ನೆರವೇರಿಸಿದ್ದಕ್ಕೆ ಸಂಬಂಧಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದ್ದೀರಿ ಮುಖ್ಯಮಂತ್ರಿಗಳೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು" ಎಂದು ಹರಿಹಾಯ್ದಿದ್ದಾರೆ.
ನಂತರ ಮತ್ತೊಂದು ಟ್ವೀಟ್ ಮಾಡಿದ ಅವರು, "ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ ಪೊಲೀಸ್‌ಗಿರಿಯ ದೌರ್ಜನ್ಯ. ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ. ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ. ಇದಕ್ಕೆಲ್ಲ ಮುಖ್ಯಮಂತ್ರಿಗಳ ಬಹಿರಂಗ ಬೆಂಬಲ, ರಾಜ್ಯದಲ್ಲಿ ಸರ್ಕಾರ ಇದೆಯೇ" ಎಂದು ಪ್ರಶ್ನಿಸಿದ್ದಾರೆ.
ಗೂಂಡಾಗಿರಿಯನ್ನು 'ಕ್ರಿಯೆಗೆ ಪ್ರತಿಕ್ರಿಯೆ' ಎಂದು ಸಮರ್ಥಿಸಿದ ಮುಖ್ಯಮಂತ್ರಿಗಳ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ. ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಕ್ಷೇಮಕರ ಎಂದು ಅವರು ಜನರಿಗೆ ಕಿವಿಮಾತು ಹೇಳಿದ್ದಾರೆ.
ಅಷ್ಟೇ ಅಲ್ಲ, ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಜಂಗಲ್ ರಾಜ್ ಅಲ್ಲ ಎಂದು ಯೋಗಿ ವಿರುದ್ಧವೂ ಕಿಡಿಕಾರಿರುವ ಸಿದ್ದರಾಮಯ್ಯ, ಬೊಮ್ಮಾಯಿ ಅವರೇ, ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸಿದ್ದರಾಮಯ್ಯ ಅವರ ಸರಣಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಹಲವಾರು ಜನ ಸಾಮಾನ್ಯರು, ಹಬ್ಬದ ಸಂಭ್ರಮದಲ್ಲಿ ಸಾಂಸ್ಕೃತಿಕ ದಿರಿಸು ಧರಿಸಿ ಫೋಟೋ ತೆಗೆಸಿಕೊಂಡಿದ್ದಕ್ಕೆ ಇಷ್ಟೆಲ್ಲ ಟೀಕೆ ಅವಶ್ಯವಿದೆಯಾ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರು ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸ್ತಾ ಇರ್ತಾರೆ. ಅವರಿಗೂ ಸ್ವಲ್ಪ ರಿಲ್ಯಾಕ್ಸ್ ಆಗಲಿ ಬಿಡಿ ಎಂದೂ ಸಮಜಾಯಿಷಿ ನೀಡಿದ್ದಾರೆ.
PublicNext
17/10/2021 03:53 pm