ಬೆಳಗಾವಿ: ಜಿಲ್ಲೆಯ ಖಾನಾಪುರದ ರೈಲ್ವೆ ಹಳಿಯ ಮೇಲೆ ಮುಸ್ಲಿಂ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ ಈ ಹತ್ಯೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು. ಅರ್ಬಾಜ್ ಅಫ್ತಾಬ್ ಮುಲ್ಲಾ (24) ಕೊಲೆಯಾದ ಯುವಕ. ಅರ್ಬಾಜ್ ಬೇರೆ ಧರ್ಮಕ್ಕೆ ಸೇರಿದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಅರ್ಬಾಜ್ ಪ್ರೀತಿಸುತ್ತಿದ್ದ ಹುಡುಗಿ ಕಡೆಯವರು ಆತನನ್ನು ಕೊಲೆಗೈದಿದ್ದಾರೆ ಎಂದು ಯುವಕನ ತಾಯಿ ನಜೀಮಾ ಶಾಯಿಕ್ ದೂರಿದ್ದಾರೆ.
ಯುವತಿಯಿಂದ ಬೇರೆಯಾಗುವಂತೆ ಬಿಜ್ರೆ ಮತ್ತು ಮಹಾರಾಜ್ ಸೇರಿದಂತೆ ಕೆಲವು ಜನರು ಕೆಲ ದಿನಗಳಿಂದ ತನ್ನ ಮಗನಿಗೆ ಬೆದರಿಕೆ ಹಾಕುತ್ತಿದ್ದರು. ಯುವತಿಯನ್ನು ತಡೆಯುವಂತೆ ಆಕೆಯ ತಾಯಿಯೊಂದಿಗೂ ಮಾತನಾಡಿದ್ದೆ. ಆದರೆ ಮುಲ್ಲಾ ಹಾಗೂ ಯುವತಿ ಮಾತು ಕೇಳುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಮುಲ್ಲಾ ಕೆಲಸಕ್ಕಾಗಿ ಪ್ರತಿದಿನ ಬೆಳಗಾವಿಯಿಂದ ರೈಲಿನಲ್ಲಿ ಓಡಾಡುತ್ತಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ ರೈಲ್ವೆ ಪೊಲೀಸರು, ಈ ವಿಚಾರವನ್ನು ಬೆಳಗಾವಿ ಜಿಲ್ಲಾ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಈ ಸಂಬಂಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
03/10/2021 09:25 pm