ಶಿವಮೊಗ್ಗ: ಸಿನಿಮೀಯ ರೀತಿಯಲ್ಲಿ,ತೀರ್ಥಹಳ್ಳಿ ತಾಲೂಕು ಮಿಟ್ಲಗೋಡು ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದೆ. ದಟ್ಟ ಕಾನನ ಮಧ್ಯೆ ಸುಟ್ಟು ಕರಕಲಾಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕಾರು ಮತ್ತು ಅಸ್ಥಿ ಪಂಜರ ಪ್ರಕರಣ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಕೊಲೆಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನನ್ನು ಸಾಗರ ತಾಲೂಕಿನ ಆಚಾಪುರ ಗ್ರಾಮದ ಮುಸ್ಲಿಂಪೇಟೆಯ ನಿವಾಸಿ ವಿನೋದ್ (45) ಎಂದು ಗುರುತಿಸಲಾಗಿದೆ. ವಿನೋದ್ ಅವರನ್ನು ಕೊಲೆಗೈದು ಕಾರಿನಲ್ಲಿ ಕಾಡಿಗೆ ತಂದು ಕಾರಿಗೆ ಬೆಂಕಿ ಹಚ್ಚಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಜೇಡಿಕುಣಿ ಗ್ರಾಮ ಪಂಚಾಯಿತಿ ಸದಸ್ಯರು ದೂರು ನೀಡಿದ ಬಳಿಕ ತನಿಖೆ ನಡೆಸಿದ ತೀರ್ಥಹಳ್ಳಿ ಪೊಲೀಸರಿಗೆ ಮೃತ ವಿನೋದ್ ನ ಹೆಂಡತಿ, ಇಬ್ಬರು ಗಂಡು ಮಕ್ಕಳು, ಹೆಂಡತಿಯ ಅಕ್ಕನ ಮಗ ಮತ್ತು ಮೃತನ ತಮ್ಮನ ಕೈವಾಡ ಇರುವುದು ತಿಳಿದು ಬಂದಿದೆ.
ಕೌಟುಂಬಿಕ ಕಲಹದ ಹಿನ್ನೆಲೆ ವಿನೋದ್ ಹತ್ಯೆಯಾಗಿದೆ ಎಂದು ತಿಳಿದು ಬಂದಿದೆ. ಇದೇ ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮನೆಯಲ್ಲಿ ವಿನೋದ್ ನನ್ನು ಕೊಂದು ಚಾಲಕನ ಸೀಟಿನಲ್ಲಿ ಮೃತದೇವನ್ನು ಇರಿಸಿದ್ದಾರೆ. ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕಾರಿನ ನಂಬರ್ ಪ್ಲೇಟ್ ಮತ್ತು ವಿನೋದ್ ಬಳಸುತ್ತಿದ್ದ ಮೊಬೈಲ್ ಫೋನನ್ನು ದಾರಿ ಮಧ್ಯೆ ಎಸೆದು ಆರೋಪಿಗಳು ಮನೆಗೆ ಮರಳಿದ್ದರು.
ತನಿಖೆ ವೇಳೆ ಮನೆಯವರ ಮೇಲೆಯೇ ಅನುಮಾನಗೊಂಡ ಪೊಲೀಸರು, ವಿಚಾರಣೆ ತೀವ್ರಗೊಳಿಸಿದಾಗ ಕೊಲೆಯ ಸಂಪೂರ್ಣ ಮಾಹಿತಿ ಬಹಿರಂಗಗೊಂಡಿದೆ. ಐವರನ್ನು ಬಂಧಿಸಲಾಗಿದೆ.
PublicNext
01/10/2021 10:31 pm