ಬೆಂಗಳೂರು : ನಗರದಲ್ಲಿ ನಡೆದಿದ್ದ ಒಂದೇ ಮನೆಯಲ್ಲಿ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ
ಕುಟುಂಬದ ಒಡೆಯ, ಪತ್ರಕರ್ತ ಹಲ್ಲೆಗೆರೆ ಶಂಕರ್ ನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ಸಾಕ್ಷಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಶಂಕರ್ ರನ್ನು ಬ್ಯಾಡರಹಳ್ಳಿ ಪೊಲೀಸರು ಶುಕ್ರವಾರ ವಿಚಾರಣೆಗೆ ಬರುವಂತೆ ಸೂಚಿಸಿದ್ದರು.
ಪೊಲೀಸ್ ಇನ್ ಸ್ಪೆಕ್ಟರ್ ರಾಜೀವ್ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಬಂಧಿಸಿದ್ದಾರೆ. ಬಂಧನವನ್ನು ಪೊಲೀಸರು ಖಚಿತ ಪಡಿಸಿದ್ದು, ಸಿಂಚನಾ ಹಾಗೂ ಸಿಂಧೂರಾಣಿ ಅವರ ಪತಿಯರನ್ನು ವಿಚಾರಣೆ ನಡೆಸಿದ್ದಾರೆ. ಸೆಪ್ಟೆಂಬರ್ 17ಕ್ಕೆ ಬೆಳಕಿಗೆ ಬಂದಿದ್ದ ಈ ಪ್ರಕರಣದಲ್ಲಿ ಶಂಕರ್ ಪತ್ನಿ ಭಾರತಿ, ಮಕ್ಕಳಾದ ಮಧುಸಾಗರ್, ಸಿಂಚನಾ ಮತ್ತು ಸಿಂಧುರಾಣಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಧುರಾಣಿ ಸಾಯುವ ಮುನ್ನ ತಮ್ಮ 9 ತಿಂಗಳ ಮಗುವನ್ನು ಕೊಲೆಗೈದಿದ್ದರು.
ಈ ದುರ್ಘಟನೆಯಲ್ಲಿ ಮೂರು ವರ್ಷದ ಕಂದಮ್ಮ ಜೀವ ಉಳಿಸಿಕೊಂಡಿತ್ತು. ಪ್ರಕರಣದ ತನಿಖೆ ನಡೆಸಿದಾಗ ಶಂಕರ್ ಅವರ ಪುತ್ರ ಮಧು ಸಾಗರ್ ಬರೆದಿದ್ದ 27 ಪುಟಗಳ ಡೆತ್ ನೋಟ್ ಪೊಲೀಸರ ಕೈಗೆ ಸಿಕ್ಕಿತ್ತು. ಕುಟುಂಬದ ಸಾಮೂಹಿಕ ಆತ್ಮಹತ್ಯೆ ಹಿಂದಿನ ರಹಸ್ಯ ಮಧುಸಾಗರ್ ಬರೆದಿರುವ ಡೈರಿ ಹಾಗೂ ಡೆತ್ ನೋಟ್ ನಲ್ಲಿ ಬಹಿರಂಗವಾಗಿತ್ತು.
ಹಲ್ಲೆಗೆರೆ ಶಂಕರ್ ಅವರ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಶೋಧ ನಡೆಸಿದಾಗ ಮಧುಸಾಗರ್ ಮಾಡಿರುವ ಎಲ್ಲಾ ಆರೋಪಗಳಿಗೂ ಸಂಬಂಧಿಸಿದಂತೆ ಪೊಲೀಸರಿಗೆ ಸಾಕ್ಷಾಧಾರಗಳು ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಹಲ್ಲೆಗೆರೆ ಶಂಕರ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿಸಿ ಬ್ಯಾಡರಹಳ್ಳಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
PublicNext
01/10/2021 09:46 pm