ಗಜಪತಿ: ಒಡಿಶಾದ ಪರಲಖೆಮುಂಡಿಯ ಅರಣ್ಯ ಸಹಾಯಕ ಸಂರಕ್ಷಕ (ಎಸಿಎಫ್) ಅಧಿಕಾರಿ ಸೌಮ್ಯ ರಂಜನ್ ಮೊಹಪಾತ್ರ ನಿಗೂಢ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಆತನ ಪತ್ನಿ ಬಿದ್ಯಾಭಾರತಿ ಪಾಂಡಾಳನ್ನು ಒಡಿಶಾ ಅಪರಾಧ ವಿಭಾಗದ ಪೊಲೀಸರು ಪಾಲಿಗ್ರಾಫ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಪಡಿಸಿದ್ದು, ಇದೀಗ ಅದರ ವರದಿ ಬಯಲಾಗಿದೆ.
ಒಟ್ಟು ಮೂವರು ಆರೋಪಿಗಳ ಪಾಲಿಗ್ರಾಫ್ ಪರೀಕ್ಷಾ ವರದಿ ಹೊರಬಿದ್ದಿದೆ. ಪರಲಖೆಮುಂಡಿಯ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‌ಒ) ಸಂಗ್ರಾಮ್ ಕೇಸರಿ ಬೆಹೆರಾ, ಮೃತ ಅರಣ್ಯಾಧಿಕಾರಿಯ ಪತ್ನಿ ಬಿದ್ಯಾ ಭಾರತಿ ಪಾಂಡಾ ಮತ್ತು ಅಡುಗೆ ಭಟ್ಟ ಮನ್ಮಥಾ ಕುಂಭರ ಪಾಲಿಗ್ರಾಫ್ ವರದಿಯನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಈ ಪಾಲಿಗ್ರಾಫ್ ವರದಿಯನ್ನು ಈ ಹಿಂದೆ ರೆಕಾರ್ಡ್ ಮಾಡಲಾದ ಮೂವರು ಆರೋಪಿಗಳ ಹೇಳಿಕೆಗಳೊಂದಿಗೆ ತಾಳೆ ಮಾಡಲಾಗುವುದು ಎಂದು ಅಪರಾಧ ವಿಭಾಗದ ಎಡಿಜಿ ಸಂಜೀವ್ ಪಾಂಡಾ ಮಾಹಿತಿ ನೀಡಿದರು. ಸಂಶೋಧನೆಗಳು ತನಿಖೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಅಪರಾಧ ವಿಭಾಗದ ಪೊಲೀಸರು ಇತರ ಇಬ್ಬರು ಆರೋಪಿಗಳ ಪಾಲಿಗ್ರಾಫ್ ಪರೀಕ್ಷೆಯನ್ನು ನಡೆಸಿದ ಕೆಲವು ದಿನಗಳ ನಂತರ ಸೆಪ್ಟೆಂಬರ್ 20 ರಂದು ಬಿದ್ಯಾ ಭಾರತಿ ಪಾಂಡಾಳನ್ನು ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಸ್‌ಎಫ್‌ಎಸ್‌ಎಲ್) ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದರು. ಸುಳ್ಳು ಪತ್ತೆ ಪರೀಕ್ಷೆಯ ಸಮಯದಲ್ಲಿ ಹಿರಿಯ ಅರಣ್ಯ ಅಧಿಕಾರಿಯ ಮುಂದೆ ಸುಮಾರು ನೂರು ಪ್ರಶ್ನೆಗಳನ್ನು ಕೇಳಲಾಯಿತು. ಡಿಎಫ್‌ಒ ಮತ್ತು ಅಡುಗೆಯವರು ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಿದ್ದು, ಅವರ ಹೇಳಿಕೆಗಳು ಒಂದಕ್ಕೊಂದು ಹೊಂದಾಣಿಕೆ ಆಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೊನ್ನೆಯಷ್ಟೇ ಸೌಮ್ಯ ರಂಜನ್ ಮೊಹಪಾತ್ರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಸೌಮ್ಯ ರಂಜನ್ ತಂದೆ ಅಭಿಮನ್ಯು ಮೊಹಪಾತ್ರ ಒಡಿಶಾದ ಅಪರಾಧ ವಿಭಾಗದ ಎಡಿಜಿ ಸಂಜೀಬ್ ಪಾಂಡಾ ಅವರನ್ನು ಭೇಟಿ ಮಾಡಿ, ಮಗನ ನಿಗೂಢ ಸಾವು ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಮಗ ಸೌಮ್ಯ ರಂಜನ್ ಮೊಹಪಾತ್ರ ನಿಗೂಢವಾಗಿ ಸಾವಿಗೀಡಾಗಿ 75 ದಿನಗಳು ಕಳೆದಿವೆ. ಆದರೆ, ನಮಗಿನ್ನೂ ನ್ಯಾಯ ದೊರೆತಿಲ್ಲ. ಎಡಿಜಿ ಅವರನ್ನು ಭೇಟಿ ಮಾಡಿ ಈ ಪ್ರಕರಣವನ್ನು ಹೊಸದಾಗಿ ತನಿಖೆ ನಡೆಸುವಂತೆ ಮನವಿ ಮಾಡಲು ನಾನಿಲ್ಲಿಗೆ ಬಂದೆ ಎಂದು ಮಾಧ್ಯಮಗಳಿಗೆ ಅಭಿಮನ್ಯು ಮೊಹಪಾತ್ರ ಹೇಳಿಕೆ ನೀಡಿದ್ದರು.
ಪರಲಖೆಮುಂಡಿಯ ಡಿಎಫ್‌ಒ (ವಿಭಾಗೀಯ ಅರಣ್ಯಾಧಿಕಾರಿ) ಸಂಗ್ರಾಮ್ ಕೇಸರಿ ಬೇರೆ ಎಲ್ಲಿಗಾದರೂ ವರ್ಗಾಯಿಸಬೇಕೆಂದು ನಾವು ಬಯಸಿದ್ದೇವೆ. ಈ ಪ್ರಕರಣದಲ್ಲಿ ಬಿದ್ಯಾ ಭಾರತಿ ಪಾಂಡಾ (ಮೃತ ಸೌಮ್ಯ ರಂಜನ್ ಪತ್ನಿ) ಳನ್ನು ಏಕೆ ಇನ್ನು ಬಂಧಿಸಿಲ್ಲ? ಈ ಪ್ರಕರಣದಲ್ಲಿ ಹೊಸದಾಗಿ ತನಿಖೆಯ ಅವಶ್ಯಕತೆ ಇದೆ. ಪರಲಖೆಮುಂಡಿಯ ಎಸಿಎಫ್ಒ ಭಾಸ್ಕರ್ ರಾವ್, ಅಡುಗೆ ಭಟ್ಟ ಮನ್ಮಥ್ ಕುಭ್, ಮಾಜಿ ಸೆಕ್ಯುರಿಟಿ ಗಾರ್ಡ್ ಗಂಗಾ ಪ್ರಧಾನ್, ಚಾಲಕ, ತೋಟದ ಮಾಲಿ, ತಹಸೀಲ್ದಾರ್, ಗರಂಡಿ ಪೊಲೀಸ್ ಠಾಣೆಯ ಒಐಸಿ ಮಮತಾ ಪಾಂಡಾ ಮತ್ತು ಪರಲಖೆಮುಂಡಿಯ ಐಐಸಿ ಬಿಬೆಕನಂದಾ ಸ್ವೈನ್ ಇಷ್ಟೂ ಜನರನ್ನು ಮತ್ತೆ ವಿಚಾರಣೆ ನಡೆಸಬೇಕಿದೆ ಎಂದು ಅಭಿಮನ್ಯು ಮೋಹಪಾತ್ರ ಮನವಿ ಮಾಡಿಕೊಂಡಿದ್ದರು.
ಸೌಮ್ಯ ರಂಜನ್ ಕುಟುಂಬ ಬಲವಾದ ಆರೋಪ ಮಾಡಿದ್ದು, ಡಿಎಫ್‌ಒ ಸಂಗ್ರಾಮ್ ಮತ್ತು ಬಿದ್ಯಾಭಾರತಿ ನಡುವೆ ಅನೈತಿಕ ಸಂಬಂಧ ಇತ್ತು. ಇದರಿಂದಲೇ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು. ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ನೀಡಿದ್ದು, ಎಫ್ಐಆರ್ನಲ್ಲಿ ಡಿಎಫ್‌ಒ ಮತ್ತು ಬಿದ್ಯಾಭಾರತಿಯನ್ನು ಪ್ರಮುಖ ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ.
ಅಂದಹಾಗೆ ಎಸಿಎಫ್ ಸೌಮ್ಯ ರಂಜನ್ ಅವರು ಜುಲೈ 11ರಂದು ಪರಲಖೆಮುಂಡಿಯ ತಮ್ಮ ಕ್ವಾಟ್ರಸ್ನಲ್ಲಿ ಸುಟ್ಟ ಗಾಯಗಳಿಂದ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಕೂಡ ಆಸ್ಪತ್ರೆಗೆ ದಾಖಲಿಸಿದ ದಿನದ ಬೆನ್ನಲ್ಲೇ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದರು.
ಕೃಪೆ: ವಿಜಯವಾಣಿ
PublicNext
30/09/2021 09:52 pm