ದಾವಣಗೆರೆ: ಒಂದೇ ಕುಟುಂಬದ ಮೂವರು ಸಾವಿಗೆ ಶರಣಾದ ಹೃದಯವಿದ್ರಾವಕ ಘಟನೆ ನಗರದ ಭಾರತ್ ಕಾಲೋನಿಯ ಶೇಖರಪ್ಪ ಬಿ ಬ್ಲಾಕ್ ನಲ್ಲಿ ನಡೆದಿದೆ.
ಕೃಷ್ಣಾನಾಯ್ಕ್, ಆತನ ಪತ್ನಿ ಸರಸ್ವತಿ ಬಾಯಿ, ಎಂಟು ವರ್ಷದ ಮಗು ಧ್ರುವ ಮೃತಪಟ್ಟವರು ಎಂದು ತಿಳಿದು ಬಂದಿದೆ. ಭಾರತ್ ಕಾಲೋನಿ ಶೇಖರಪ್ಪ ಬಿ ಬ್ಲಾಕನಲ್ಲಿ ವಾಸವಾಗಿದ್ದ ಕೃಷ್ಣನಾಯ್ಕ್ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಸರಸ್ವತಿ ಬಾಯಿ ಮೂಲವ್ಯಾಧಿಯಿಂದ ಬಳಲುತ್ತಿದ್ದರೆ, ಕೃಷ್ಣಾನಾಯ್ಕ್ ರಿಗೆ ಸಹ ಆರೋಗ್ಯ ಸಮಸ್ಯೆ ಇತ್ತು. ಕೃಷ್ಣನಾಯ್ಕ್ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದರು. ಇದರಿಂದ ತೀವ್ರ ಮನನೊಂದಿದ್ದರು. ಆರೋಗ್ಯದಲ್ಲಿ ಉಂಟಾಗುತ್ತಿದ್ದ ಏರುಪೇರಿನಿಂದಾಗಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗುತ್ತಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬೇಸತ್ತಿದ್ದ ದಂಪತಿ ಆಸ್ಪತ್ರೆಗೆ ತೋರಿಸಿದ್ದರೂ ಸಂಪೂರ್ಣ ಗುಣಮುಖರಾಗಿರಲಿಲ್ಲ ಎನ್ನಲಾಗಿದೆ.
ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ಓದುತ್ತಿದ್ದ ಧ್ರುವ ಎಂಬ ಬಾಲಕ ಮೃತಪಟ್ಟಿದ್ದು, ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಕೃಷ್ಣಾನಾಯ್ಕ್ ಶವ ಪತ್ತೆಯಾಗಿದ್ದರೆ, ಸರಸ್ವತಿ ಬಾಯಿ ಹಾಗೂ ಮಗು ಧ್ರುವ ಮಲಗಿದ ಸ್ಥಿತಿಯಲ್ಲೇ ಪತ್ತೆಯಾಗಿದ್ದಾರೆ.ಮನೆ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೂ ಆರೋಗ್ಯ ಕೈಕೊಟ್ಟ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರ್ ಎಂ. ಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಂಬಂಧಿಕರ ಮುಗಿಲು ಮುಟ್ಟಿದ ಆಕ್ರಂದನ ಮುಗಿಲು ಮುಟ್ಟಿದ್ದು, ಏನು ಅರಿಯದ ಎಂಟು ವರ್ಷದ ಕಂದಮ್ಮನೂ ಬಲಿಯಾಗಿದ್ದು ವಿಪರ್ಯಾಸವೇ ಸರಿ.
PublicNext
20/09/2021 10:03 am