ಬೆಂಗಳೂರು: 20 ರೂಪಾಯಿ ವಿಚಾರಕ್ಕೆ ಚಿಂದಿ ಆಯುವವರ ನಡುವೆ ಜಗಳ ಉಂಟಾಗಿ, ಕೊಲೆಯಲ್ಲಿ ಅಂತ್ಯವಾಗಿದ್ದ ಪ್ರಕರಣವನ್ನು ಬೊಮ್ಮನಹಳ್ಳಿ ಠಾಣಾ ಪೊಲೀಸರು ಭೇದಿಸಿದ್ದಾರೆ.
ದೀಪಕ್, ಹೇಮಂತ್ ಗೋಪ್ ಹಾಗೂ ಮಾದೇಶ್ ಬಂಧಿತರು. ಸಂಜಯ್ ಅಲಿಯಾಸ್ ನೇಪಾಳಿ (30) ಕೊಲೆಯಾದ ವ್ಯಕ್ತಿ. ಸಂಜಯ್ 15 ದಿನಗಳ ಹಿಂದೆ ಊಟಕ್ಕೆ ಹಣವಿಲ್ಲ ಎಂದು ದೀಪಕ್ ಬಳಿ 20 ರೂಪಾಯಿ ಪಡೆದಿದ್ದ. 15 ದಿನವಾದರೂ ಮರಳಿ ಹಣ ನೀಡಿಲ್ಲವೆಂಬ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಸೆಪ್ಟೆಂಬರ್ 13ರಂದು ಬೊಮ್ಮನಹಳ್ಳಿಯ 1ನೇ ಕ್ರಾಸ್ನಲ್ಲಿ ಚಿಂದಿ ಆಯುವವರ ನಡುವೆ ಜಗಳ ಶುರುವಾಗಿತ್ತು. ಈ ವೇಳೆ ಆರೋಪಿಗಳು ಸಂಜಯ್‌ನನ್ನು ಕೊಲೆಗೈದು ತಲೆ ಮರೆಸಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಘಟನಾ ಸ್ಥಳದ ಸಮೀಪದ ಮದ್ಯದ ಅಂಗಡಿಯ ಕ್ಯಾಶಿಯರ್ ಕೊಟ್ಟ ಒಂದು ಸುಳಿವಿನಿಂದಾಗಿ ಪೊಲೀಸರು ಹಂತಕರ ಹೆಡೆಮುರಿ ಕಟ್ಟಿದ್ದಾರೆ.
ಘಟನೆಯ ದಿನ ಸಂಜಯ್ ಹಾಗೂ ಆರೋಪಿ ದೀಪಕ್ ಒಂದೇ ವೈನ್ ಶಾಪ್ನಲ್ಲಿ ಮದ್ಯ ಖರೀದಿಸಿದ್ದರು. ವೈನ್ ಶಾಪ್ನ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ವೇಳೆ ದೀಪಕ್ ತಾನೇ ತನ್ನ ಸಹಚರರೊಂದಿಗೆ ಸೇರಿ ಸಂಜಯ್‌ನನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
PublicNext
17/09/2021 03:43 pm