ಬೆಂಗಳೂರು: ರಾಜ್ಯದಲ್ಲಿ ಸೇವೆಯಲ್ಲಿರುವ ಐಪಿಎಸ್- ಐಎಫ್ಎಸ್ ಅಧಿಕಾರಿ ದಂಪತಿಯ ನಡುವಿನ ಕಾನೂನು ಹೋರಾಟ ಹಾಗೂ ಪರಸ್ಪರ ಆರೋಪ- ಪ್ರತ್ಯಾರೋಪಗಳು ಈಗ ಮತ್ತೊಂದು ಹಂತ ತಲುಪಿದೆ. ಪತಿಯ ವಿರುದ್ಧ ಆ್ಯಸಿಡ್ ದಾಳಿ, ಜೀವ ಬೆದರಿಕೆ ಹಾಕಿರುವುದಾಗಿ ಕಳೆದ ಜೂನ್‌ನಲ್ಲಿ ಆರೋಪಿಸಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ಪತಿ, ಐಎಫ್‌ಎಸ್ ಅಧಿಕಾರಿ ನಿತೀನ್ ಸುಭಾಶ್ ಲೋಲಾ, ಇದೀಗ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಅವರಿಗೆ ಪತ್ರ ಬರೆದಿರುವ ನಿತೀನ್ ಸುಭಾಶ್, "ಪತ್ನಿ ವರ್ತಿಕಾ ಕಟಿಯಾರ್ ನಡವಳಿಕೆ ಸರಿಯಿಲ್ಲ. ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ. ಕಾನೂನು ನಿಯಮಗಳನ್ನು ಗಾಳಿಗೆ ತೂರಿದ್ದು, ಈ ನಿಟ್ಟಿಯಲ್ಲಿ ಕ್ರಮ ಕೈಗೊಳ್ಳಬೇಕು" ಎಂದು ದೂರಿದ್ದಾರೆ.
ಐಎಎಸ್ ಅಧಿಕಾರಿಯಾಗಿದ್ದ ದಿವಂಗತ ಅನುರಾಗ ತಿವಾರಿ ಸಾವಿನ ಹಿಂದೆ ವರ್ತಿಕಾ ಕಟಿಯಾರ್ ಕೈವಾಡವಿದೆ. ಅಯಾಜ್ ಖಾನ್ ಎಂಬವರ ಜೊತೆಗೆ ಕೆಸಿನೊ ಸೇರಿದಂತೆ ಬೇರೆ ಬೇರೆ ಕಡೆ ಓಡಾಡಿದ್ದಾರೆ. ಹಣಕಾಸಿನ ವ್ಯವಹಾರದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರದಿಂದ ಅನುಮತಿ ಪಡೆಯದೆ ಶ್ರೀಲಂಕಾ, ಅಫ್ಘಾನಿಸ್ತಾನ, ಸ್ವಿಟ್ಜರ್‌ಲ್ಯಾಂಡ್, ಆಸ್ಟ್ರಿಯಾ, ಇಟಲಿ ಸೇರಿದಂತೆ ವಿವಿಧ ದೇಶಕ್ಕೆ ಜೊತೆಯಲ್ಲಿ ಓಡಾಡಿದ್ದಾರೆ. ಈ ಮೂಲಕ ಸಿವಿಲ್ ಸರ್ವೀಸ್ ನಿಯಮಗಳನ್ನು ಅವರು ಗಾಳಿಗೆ ತೂರಿದ್ದಾರೆ ಎಂದು ತಿಳಿಸಿದ್ದಾರೆ.
ವರ್ತಿಕಾ ಕಟಿಯಾರ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕೋಪ ನಿಯಂತ್ರಣ ಮಾಡಿಕೊಳ್ಳಲು 2017ರಲ್ಲಿ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕೆ ಮಾನಸಿಕ ಅಸ್ವಸ್ಥತೆ ಹಾಗೂ ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅಲ್ಲದೆ ತಮ್ಮ ಕೈಕೆಳಗೆ ಕೆಲಸ ಮಾಡುವ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಆಕೆಗೆ ಪ್ರಮುಖ ಜವಾಬ್ದಾರಿ ನೀಡುವ ಮುನ್ನ ಈ ಮೇಲಿನ ಅಂಶಗಳ ಬಗ್ಗೆ ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪತಿ ನಿತೀನ್ ಸುಭಾಶ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪತ್ನಿ ವರ್ತಿಕಾ ಕಟಿಯಾರ್, 'ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಪತಿ ಈ ರೀತಿ ಮಾಡಿದ್ದಾರೆ. ಅವರ ವಿರುದ್ಧ ನಾನು ನೀಡಿದ ದೂರಿನ ಮೇರೆಗೆ ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಿದ್ದೇನೆ. ಕಳೆದ ಮೇ-ಜೂನ್ ಲಾಕ್‌ಡೌನ್ ನಡುವೆಯೂ ಬೆಂಗಳೂರಿಗೆ ಬಂದು ಆ್ಯಸಿಡ್ ಹಾಕಲು ಪ್ರಯತ್ನಪಟ್ಟಿದ್ದಾರೆ. ನನ್ನನ್ನು ಹಿಂಬಾಲಿಸಿ ಆ್ಯಸಿಡ್ ಎರಚಲು ಯತ್ನಿಸಿದ್ದಾರೆ. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದೆ. ನನ್ನ ಮೇಲಿನ ಸಿಟ್ಟಿಗೆ ಈ ರೀತಿ ಸುಳ್ಳು ಆರೋಪ ಮಾಡ್ತಿದ್ದಾರೆ' ಎಂದು ಹೇಳಿದ್ದಾರೆ.
'ಈ ಸಂಬಂಧ ದೆಹಲಿ ಹೈಕೊರ್ಟ್‌ನಲ್ಲಿ ಐದು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಅವರ ಮೇಲೆ ಹೇಳುವುದಕ್ಕೆ ನನಗೂ ಬಹಳಷ್ಟು ವಿಚಾರವಿದೆ. ಒಬ್ಬ ಮಹಿಳೆ ಮೇಲೆ ಕೆಟ್ಟದಾಗಿ ಆರೋಪ ಮಾಡುವುದು ಸರಿಯಲ್ಲ. ಪೊಲೀಸ್ ಇಲಾಖೆ ಕೆಲಸಕ್ಕೆ ಸೇರಿ 11 ವರ್ಷ ಆಯಿತು. ಯಾವುದೇ ತನಿಖೆಯ ಬಗೆಗೂ ನನಗೆ ಭಯವಿಲ್ಲ' ಎಂದಿದ್ದಾರೆ.
PublicNext
02/09/2021 09:06 pm