ಚಂಢೀಗಡ: ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆಗೈದ ಅಮಾನವೀಯ ಘಟನೆ ಹರಿಯಾಣದ ಸೋನಿಪತ್ ಹಳ್ಳಿಯೊಂದರಲ್ಲಿ ನಡೆದಿದೆ.
ಮೃತ ಸಹೋದರಿಯರು 14 ಮತ್ತು 16 ವರ್ಷ ವಯಸ್ಸಿನವರಾಗಿದ್ದು ತಮ್ಮ ತಾಯಿಯೊಂದಿಗೆ ವಾಸವಾಗಿದ್ದರು. ಕೃತ್ಯ ಎಸಗಿದ ನಾಲ್ವರು ಕಾಮುಕರು ಬಾಲಕಿಯರ ಮನೆಯ ಪಕ್ಕದಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪ್ರಮುಖ ಆರೋಪಿಗಳು 22 ರಿಂದ 25 ವರ್ಷ ವಯಸ್ಸಿನವರಾಗಿದ್ದು ಇವರೆಲ್ಲಾ ವಲಸೆ ಕಾರ್ಮಿಕರಾಗಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕುಂಡ್ಲಿ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾಪಿಗಳು ಆಗಸ್ಟ್ 5 ಮತ್ತು 6ರ ಮಧ್ಯರಾತ್ರಿ ಆರೋಪಿಗಳು ಬಲವಂತವಾಗಿ ಮನೆಗೆ ನುಗ್ಗಿ ತಾಯಿಗೆ ಬೆದರಿಕೆ ಹಾಕಿದ್ದಾರೆ. ನಂತರ ನಾಲ್ವರು ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ ಅವರಿಗೆ ಕೀಟನಾಶಕ ಸೇವಿಸುವಂತೆ ಒತ್ತಾಯಿಸಿ ಕುಡಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ಆರೋಪಿಗಳು, ಯಾರೇ ಕೇಳಿದರೂ ಹಾವು ಕಚ್ಚಿರುವುದಾಗಿ ಹೇಳುವಂತೆ ಬಾಲಕಿಯರಿಗೆ ಹಾಗೂ ಅವರ ತಾಯಿಗೆ ಎಚ್ಚರಿಕೆ ನೀಡಿದ್ದಾರೆ. ನಂತರ ದೆಹಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬಾಲಕಿಯರಿಬ್ಬರೂ ಸಾವನ್ನಪ್ಪಿದ್ದಾರೆ.
ಜೀವಭಯದಿಂದ ಆರಂಭದಲ್ಲಿ ಬಾಲಕಿಯರ ತಾಯಿ ಆಸ್ಪತ್ರೆಯ ಅಧಿಕಾರಿಗಳಿಗೂ ಇಬ್ಬರು ಸಹೋದರಿಯರಿಗೆ ಹಾವು ಕಚ್ಚಿದೆ ಎಂದು ಹೇಳಿದ್ದರು. ಆದರೆ ಅವರ ಹೇಳಿಕೆ ಬಗ್ಗೆ ಶಂಕೆ ವ್ಯಕ್ತಪಡಿಸಿದ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದಾಗ ಸತ್ಯ ಬೆಳಕಿಗೆ ಬಂದಿದೆ.
PublicNext
11/08/2021 10:05 am