ವಿಜಯವಾಡ: ಕೇವಲ 23 ವಯಸ್ಸಿನಲ್ಲೇ ಯುವಕನೋರ್ವ ಒಂದಲ್ಲ ಎರಡಲ್ಲ ಬರೋಬ್ಬರಿ 200 ಯುವತಿಯರು, 100 ವಿವಾಹಿತ ಮಹಿಳೆಯರಿಗೆ ವಂಚಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದತುರ್ ಗೀತಾಶ್ರಮ್ ಸ್ಟ್ರೀಟ್ ನಿವಾಸಿ ಚೆನ್ನುಪಲ್ಲಿ ಪ್ರಸನ್ನಕುಮಾರ್ ಅಲಿಯಾಸ್ ಪ್ರಶಾಂತಿ ರೆಡ್ಡಿ ಅಲಿಯಾಸ್ ರಾಜರೆಡ್ಡಿ ಅಲಿಯಾಸ್ ಟೋನಿ (23) 300 ಮಹಿಳೆಯರಿಗೆ ವಂಚಿಸಿದ ಯುವಕ. ಪ್ರಥಮ ವರ್ಷದ ಬಿ.ಟೆಕ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಪ್ರಸನ್ನ, 2017ರಿಂದ ಐಷಾರಾಮಿ ಪಾರ್ಟಿಗಳಲ್ಲಿ ಸರಗಳ್ಳತನವನ್ನು ಆರಂಭಿಸಿದ. ಅನೇಕ ಪ್ರಕರಣಗಳಲ್ಲಿ ಈಗಾಗಲೇ ಜೈಲು ಶಿಕ್ಷೆ ಅನುಭವಿಸಿರುವ ಪ್ರಸನ್ನ ಜಾಮೀನಿನ ಮೇಲೆ ಹೊರಗಿದ್ದಾನೆ.
ಪ್ರಸನ್ನಗೆ 2020ರಲ್ಲಿ ಶೇರ್ಚಾಟ್ ಮೂಲಕ ನಬಿಕೊಟಾ ಎಂಬ ವ್ಯಕ್ತಿಯಿಂದ ಶ್ರೀನಿವಾಸ್ ಎಂಬಾತನ ಪರಿಚಯವಾಗುತ್ತದೆ. ಶ್ರೀನಿವಾಸ್ಗೆ ಪ್ರಶಾಂತ್ ರೆಡ್ಡಿ ಅಲಿಯಾಸ್ ರಾಜರೆಡ್ಡಿ ಎಂಬ ಹೆಸರಿನಿಂದ ಪ್ರಸನ್ನ ಪರಿಚಿತನಾಗುತ್ತಾನೆ. ಆತನಿಗೆ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಾನೆ. ಈ ಸಂಬಂಧ ಶ್ರೀನಿವಾಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಪೊಲೀಸರು ಪ್ರಸನ್ನಕುಮಾರ್ ರೆಡ್ಡಿಯನ್ನು ಬಂಧಿಸುತ್ತಾರೆ.
ವಿಚಾರಣೆ ವೇಳೆ ಪೊಲೀಸರಿಗೆ ಪ್ರಸನ್ನಕುಮಾರ್ ರೆಡ್ಡಿ ಬಳಿ ಇದ್ದ ಸ್ಮಾರ್ಟ್ಫೋನ್ ನೋಡಿ ಶಾಕ್ ಆಗುತ್ತದೆ. ಅದರಲ್ಲಿ ನೂರಾರು ಮಹಿಳೆಯರ ಅರೆಬೆತ್ತಲೆ ಮತ್ತು ಬೆತ್ತಲೆ ಫೋಟೋ ಹಾಗೂ ವಿಡಿಯೋಗಳು ಇರುವುದು ನೋಡಿ ಪೊಲೀಸರು ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಈ ವೇಳೆ ಸುಮಾರು 100 ಮಹಿಳೆಯರು ಮತ್ತು 200 ಯುವತಿಯರಿಗೆ ಪ್ರಸನ್ನ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಆತನಿಂದ 1.26 ಲಕ್ಷ ರೂ. ನಗದು ಮತ್ತು 30 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
PublicNext
03/08/2021 08:00 pm