ಬೀದರ್: ಜಮೀನಿನ ಮ್ಯುಟೇಷನ್ ಮಾಡಿಕೊಡಲು 15 ಲಕ್ಷ ರೂ.ಗಳ ಲಂಚ ಪಡೆಯುವಾಗ ತಹಶೀಲ್ದಾರ್ ಒಬ್ಬರು ಭ್ರಷ್ಟಾಚಾರ ವಿರೋಧಿ ದಳ(ಎಸಿಬಿ)ದ ಬಲೆಗೆ ಬಿದ್ದಿರುವ ಪ್ರಸಂಗ ಬೀದರ್‌ನಲ್ಲಿ ನಡೆದಿದೆ.
ಬೀದರ್ನ ತಾಲ್ಲೂಕು ದಂಡಾಧಿಕಾರಿ (ಗ್ರೇಡ್ 1 ತಹಶೀಲ್ದಾರ್) ಗಂಗಾದೇವಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಗಂಗಾದೇವಿ ಅವರು ನಗರದ ಚಿದ್ರಿ ಸರ್ವೆ ನಂಬರ್ 15 ರ ಭೂಮಿ ಮ್ಯುಟೇಷನ್ ಮಾಡಲು ಲೀಲಾಧರ್ ಪಟೇಲ್ ಎಂಬುವರಿಗೆ 20 ಲಕ್ಷ ರೂ.ಗಳ ಡಿಮ್ಯಾಂಡ್ ಇಟ್ಟಿದ್ದರು. ನಂತರ 15 ಲಕ್ಷ ರೂ.ಗಳಿಗೆ ಒಪ್ಪಿದ್ದು, ಈ ಬಗ್ಗೆ ಲೀಲಾಧರ್ ಎಸಿಬಿಗೆ ದೂರು ನೀಡಿದ್ದರು.
ಹಲವು ಭ್ರಷ್ಟಾಚಾರದ ಆರೋಪ ಹೊತ್ತಿದ್ದ ತಹಶೀಲ್ದಾರ್ ಗಂಗಾದೇವಿ ಅವರ ಮನೆಗೆ ಎಸಿಬಿ ಎಸ್‌ಪಿ ಮೇಘಣ್ಣನವರ್ ನೇತೃತ್ವದಲ್ಲಿ ಇಂದು ದಾಳಿ ನಡೆಸಲಾಯಿತು. ಗಂಗಾದೇವಿ ಅವರು ಬೆಂಗಳೂರಿನ ಮಾರತಹಳ್ಳಿಯವರು. ಒಂದು ವರ್ಷದಿಂದ ಬೀದರ್ ತಾಲೂಕು ಗ್ರೇಡ್-1 ತಹಶೀಲ್ದಾರ್ (ತಾಲೂಕು ದಂಡಾಧಿಕಾರಿ) ಆಗಿ ಕೆಲಸ ಮಾಡುತ್ತಿದ್ದಾರೆ.
PublicNext
29/07/2021 07:48 am