ಬೆಳಗಾವಿ: ಮಸಾಜ್ ಸೆಂಟರ್ ಎಂದು ಬೋರ್ಡ್ ಹಾಕಿ ಅನೈತಿಕ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಪ್ರಕಾಶ ಯಳ್ಳೂರಕರ (27) ಹಾಗೂ ವಿನಾಯಕ ಕೇದಾರಿ (37) ಬಂಧಿತರು. ಈ ವೇಳೆ ಪೊಲೀಸರು ಮೂವರ ಹೆಣ್ಣು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ.
ಆರೋಪಿಗಳು ಟಿಳಕವಾಡಿಯ ಕಾಂಗ್ರೆಸ್ ರಸ್ತೆಯಲ್ಲಿ "ನ್ಯೂ ಗೆಟ್ ವೇ ಯುನಿಸೆಕ್ಸ್ ಸ್ಪಾ" ನಡೆಸುತ್ತಿದ್ದರು. ಆದರೆ ಇಲ್ಲಿ ಮಸಾಜ್, ಸ್ಪಾ ಬದಲು ಅನೈತಿಕ ದಂಧೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಗಡ್ಡೆಕರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸುತ್ತಿದ್ದ ಕಾಂಡೋಮ್ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರು ಆನ್‌ಲೈನ್ ಅಥವಾ ಚಾಟಿಂಗ್ ಡೇಟಿಂಗ್ ಮುಖಾಂತರ ಗ್ರಾಹಕರನ್ನು ಸೇಳಿತ್ತಿದ್ದರು ಎನ್ನುವ ಮಾಹಿತಿ ವಿಚಾರಣೆ ವೇಳೆ ಬಹಿರಂಗವಾಗಿದೆ ಎಂದು ಡಿಸಿಪಿ ವಿಕ್ರಂ ಆಮ್ಟೆ ತಿಳಿದಿದ್ದಾರೆ.
ಸಿ.ಇ.ಎನ್. ವಿಭಾಗದ ಪೊಲೀಸರ ಕಾರ್ಯವನ್ನು ನಗರ ಪೋಲಿಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.
PublicNext
06/02/2021 07:39 pm