ಬೆಂಗಳೂರು: ಮೊಬೈಲ್ ಕಳ್ಳನ ಜೊತೆಗೆ 2 ಲಕ್ಷ ರೂ. ಡೀಲ್ ಡಿಮ್ಯಾಂಡ್ ಮಾಡಿ ಹಣ ಪಡೆಯುವಾಗ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಮುಖ್ಯ ಪೇದೆ ಭ್ರಷ್ಟಾಚಾರ ವಿರೋಧಿ ಪಡೆಯ (ಎಸಿಬಿ) ಬಲೆಗೆ ಇಂದು ಬಿದ್ದಿದ್ದಾರೆ.
ಬಯ್ಯಪ್ಪನ ಹಳ್ಳಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದವರು. ಎಸಿಬಿ ದಾಳಿಯಿಂದಾಗಿ ಹಣದ ಸಮೇತ ಪರಾರಿಯಾಗಲು ಯತ್ನಿಸಿದ ಪೇದೆ ಕುಮಾರ್ ಎಂಬಾತ ಕಾಲು ಮುರಿದುಕೊಂಡಿದ್ದಾರೆ.
ಮೊಬೈಲ್ ಕಳ್ಳತನ ಪ್ರಕರಣದ ಆರೋಪಿಗೆ ಪಿಎಸ್ಐ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿ 2 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಒಂದು ಲಕ್ಷಕ್ಕೆ ಡೀಲ್ ಕುದುರಿತ್ತು. ಮೊಬೈಲ್ ಕಳ್ಳ ಲಂಚದ ಹಣ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದ ಎಸಿಬಿ ಎಸಿಪಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡವು ದಾಳಿ ನಡೆಸಿದೆ. ತಕ್ಷಣವೇ ಕುಮಾರ್ ಠಾಣೆಯ ಕಟ್ಟಡದ ಮೊದಲ ಮಹಡಿಯಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಮೇಲಿನಿಂದ ಕೆಳಗೆ ಬಿದ್ದಿದ್ದ ಅವರ ಕಾಲು ಮುರಿತವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಬ್ ಇನ್ಸ್ಪೆಕ್ಟರ್ ಸೌಮ್ಯ ಹಾಗೂ ಮುಖ್ಯ ಪೇದೆ ರೆಡ್ಡಿ ಅವರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
PublicNext
12/01/2021 05:28 pm