ಮುಂಬೈ: ಸಾಲ ಕೊಟ್ಟವರು ವಾಟ್ಸ್ಆ್ಯಪ್ ಗ್ರುಪ್ ಮಾಡಿ ಅದರಲ್ಲಿ ಗೌರವ ಕಳೆದರೆಂಬ ಕಾರಣಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಯೋಗೇಶ್ ಮಾನೆ(22) ಎಂಬಾತನೇ ಆತ್ಮಹತ್ಯೆಗೆ ಶರಣಾದ ಯುವಕ. ಸಾಲ ಕೊಟ್ಟವರು ಮಾಡಿದ ಅವಮಾನಕ್ಕೆ ಮನನೊಂದು ಐರೋಲಿ ಸೇತುವೆಯಿಂದ ಹಾರಿದ ಯೋಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಲುಂಡ್ ವೆಸ್ಟ್ ನ ರೋಹಿದಾಸ್ ನಗರದ ನಿವಾಸಿ ಈತ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸವಾಗಿದ್ದನು. ತಾಂತ್ರಿಕ ಅಧ್ಯಯನ ಪೂರ್ಣಗೊಳಿಸಿದ್ದ ಯೋಗೇಶನಿಗೆ ಕೆಲಸ ಸಿಕ್ಕಿರಲಿಲ್ಲ. ಹಾಗಾಗಿ ಆಟೋ ಓಡಿಸುತ್ತ ತಂದೆಗೆ ಸಹಾಯ ಮಾಡಲು ನಿರ್ಧರಿಸಿದ್ದನು. ತಂದೆ ಆನಂದ್ ಮಾನೆ ಅವರು ಮಗನಿಗೆ ಆಟೋ ರಿಕ್ಷಾ ಕೊಡಿಸಿದ್ದರು. ಅದರ ನೋಂದಣಿ ಹಾಗೂ ಇತರ ದಾಖಲೆಗಳಿಗಾಗಿ ಯೋಗೇಶ್ 47ಸಾವಿರ ರೂ ಸಾಲ ಮಾಡಿದ್ದ. ಇದನ್ನ ತೀರಿಸಲಾಗದೇ ಹೆಣಗಾಡುತ್ತಿದ್ದ. ಸಾಲ ಕೊಟ್ಟವರು ವಾಟ್ಸ್ಆ್ಯಪ್ ಗ್ರುಪ್ ಮಾಡಿ ಅದರಲ್ಲಿ ಯೋಗೇಶ್ ನ ಸಂಬಂಧಿಕರು ಹಾಗೂ ಸ್ನೇಹಿತರನ್ನು ಸೇರಿಸಿ ಸಾಲ ಮರು ಪಾವತಿ ಮಾಡುವಂತೆ ಅದೇ ಗ್ರುಪ್ ನಲ್ಲಿ ಮೆಸೇಜ್ ಹಾಕಿದ್ದರು. ಮತ್ತು ತುಚ್ಛವಾಗಿ ಬರೆದಿದ್ದರು ಎನ್ನಲಾಗಿದೆ. ಹೀಗಾಗಿ ಮನನೊಂದ ಯೋಗೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
PublicNext
29/12/2020 12:48 pm