ಕಾರವಾರ: ವಿರೋಧದ ನಡುವೆಯೂ ಗೆಳೆಯ ಕೈ ಹಿಡಿದ ಪುತ್ರಿಯನ್ನು ತಾಯಿಯೇ ಅಪಹರಿಸಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಇಂದು ವರದಿಯಾಗಿದೆ.
ತಾಯಿ ರೂಪಾ ಶಿರ್ಸಿಕರ್ ಪುತ್ರಿ ರುತಿಕಾ ಅವರನ್ನು ಅಪಹರಿಸಿದ್ದಾರೆ. ರೂಪಾ ಶಿರಸಿ ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿದ್ದರು. ಆದರೆ ರುತಿಕಾ ಶಿರಸಿಯ ಬಸವೇಶ್ವರ ನಗರದ ಮಣಿಕಂಠ ಎಂಬ ಯುವಕನನ್ನು ಪ್ರೀತಿಸಿ ಕೆಲವು ದಿನದ ಹಿಂದೆ ವಿವಾಹವಾಗಿದ್ದಳು. ಈ ಬಗ್ಗೆ ತಾಯಿ ರೂಪಾ ಶಿರ್ಸಿಕರ್ ಅವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಮೂರು ಜನ ಯುವಕರೊಂದಿಗೆ ಬಸವೇಶ್ವರ ನಗರದಲ್ಲಿದ್ದ ರುತಿಕಾ ಮನೆಗೆ ಏಕಾಏಕಿ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದ ಎಲ್ಲರಿಗೂ ಪೆಪ್ಪರ್ ಸ್ಪ್ರೇಯನ್ನು ಮುಖಕ್ಕೆ ಎರಚಿ ಮಗಳನ್ನು ಆಕೆಯ ಗಂಡನ ಎದುರೇ ತಾನು ತಂದಿದ್ದ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾಳೆ.
ಈ ಸಂಬಂಧ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಮಣಿಕಂಠ ಅವರು ಪತ್ನಿ ಅಪಹರಣದ ಬಗ್ಗೆ ದೂರು ನೀಡಿದ್ದಾರೆ. ಇತ್ತ ಆರೋಪಿ ರೂಪಾ ಮೊಬೈಲ್ ಸ್ವಿಚ್ಛ್ ಆಫ್ ಮಾಡಿ, ಕುಟುಂಬದೊಂದಿಗೆ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
PublicNext
26/12/2020 02:02 pm