ವಿಜಯಪುರ/ಉಡುಪಿ: ಕೇಸರಿ ದಿರಿಸು ಧರಿಸಿ ಠಾಣೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಪೊಲೀಸರ ಫೋಟೋ ವೈರಲ್ ಆಗುತ್ತಿವೆ. ಪೊಲೀಸರ ಈ ವರ್ತನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ವಿಜಯಪುರ ಗ್ರಾಮೀಣ ಠಾಣೆ ಹಾಗೂ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಗಳಲ್ಲಿನ ಫೋಟೋಗಳು ಹರಿದಾಡುತ್ತಿವೆ. ವಿಜಯಪುರ ಗ್ರಾಮೀಣ ಠಾಣೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ ಆನಂದಕುಮಾರ್ ಸೇರಿದಂತೆ ಎಲ್ಲರೂ ಶಾಲು, ಬಿಳಿ ಟೊಪ್ಪಿ ಹಾಗೂ ಕೇಸರಿ ಶಾಲು ಧರಿಸಿದ್ದಾರೆ. ಹಾಗೂ ಕಾಪು ಪೊಲೀಸ್ ಠಾಣೆಯಲ್ಲಿ ನಡೆದ ಪೂಜೆ ವೇಳೆ ಪೊಲೀಸರು ಕೇಸರಿ ಅಂಗಿ, ಹಾಗೂ ಬಿಳಿ ಪಂಚೆ ಧರಿಸಿದ್ದರು.
'ಗೊಂದಲಕ್ಕೊಳಗಾಗಬೇಡಿ. ಇದು ಹಿಂದೂ ಸಂಘಟನೆ ಬೈಟಕ್ ಅಲ್ಲ. ಇದು ನಮ್ಮ ಪೊಲೀಸರ ತಂಡ. ಜೈ ಶ್ರೀರಾಮ್' ಎಂದು ಬರೆದು ಅದರೊಂದಿಗೆ ಈ ಫೋಟೋಗಳನ್ನು ಹರಿಬಿಡಲಾಗಿದೆ.
ಈ ಬಗ್ಗೆ ನನ್ನ ಗಮನಕ್ಕೆ ಇರಲಿಲ್ಲ. ಮಾಹಿತಿ ಪಡೆಯುತ್ತೇನೆ ಎಂದು ಉಡುಪಿ ಎಸ್ಪಿ ಎನ್. ವಿಷ್ಣುವರ್ಧನ್ ಹೇಳಿದ್ದಾರೆ. ಅದರಂತೆ ಠಾಣೆಯಲ್ಲಿ ಆಯುಧ ಪೂಜೆ ಪ್ರತಿವರ್ಷವೂ ನಡೆಯುತ್ತದೆ. ನನಗೆ ಆಹ್ವಾನ ಇತ್ತು. ನಾನು ಪಾಲ್ಗೊಂಡಿದ್ದೇನೆ. ಇದರಲ್ಲಿ ತಪ್ಪಿಲ್ಲ. ನಾನು ಮುಸ್ಲಿಮರು ನಮಾಜ್ ಗೆ ಕರೆದರೂ ಹೋಗುವೆ. ನಾನು ಯಾವುದೇ ಆಚರಣೆಗಳ ವಿರೋಧಿಯಲ್ಲ ಎಂದು ವಿಜಯಪುರ ಎಸ್.ಪಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆದರೆ ಈ ಎರಡೂ ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ಶುರುವಾಗಿದೆ.
PublicNext
18/10/2021 11:35 am