ಲಕ್ನೋ: ಮನೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಬೇಡುಪರ್ ಗ್ರಾಮದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸಲ್ಮಾನ್ (21) ಎಂದು ಗುರುತಿಸಲಾಗಿದೆ. ಧ್ವಜ ತಯಾರು ಮಾಡಿದ ಆತನ ಚಿಕ್ಕಮ್ಮ ಶಹನಾಜ್ (22) ವಿರುದ್ಧವೂ ಪ್ರಕರಣ ದಾಖಲಾಗಿದೆ. ಇದಲ್ಲದೆ ಧ್ವಜ ಹಾರಿಸಲು ಸಹಕರಿಸಿದ ಸಲ್ಮಾನ್ ಸೋದರ ಇಮ್ರಾನ್ ವಿರುದ್ಧವೂ ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕುಶಿನಗರ ಜಿಲ್ಲೆಯ ತೇರ್ಯಸುಜನ್ ಪೊಲೀಸ್ ಠಾಣಾ ವ್ಯಾಪ್ತಿಯ ಬೇಡುಪರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
75ನೇ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆ ‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ದೇಶದಾದ್ಯಂತ ಜನರು ತಮ್ಮ ಮನೆಗಳ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಆದರೆ ಸಲ್ಮಾನ್ ಪಾಕ್ ಧ್ವಜ ಹಾರಿಸಿ ಜೈಲುಪಾಲಾಗಿದ್ದಾನೆ.
ಪಾಕಿಸ್ತಾನದ ಧ್ವಜವನ್ನು ಮನೆಯ ಮೇಲೆ ಹಾರಿಸುತ್ತಿರುವುದನ್ನು ಯಾರೋ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿ ಪೊಲೀಸರು ಧ್ವಜವನ್ನು ಕೆಳಗಿಳಿಸಿದ್ದು, ಯುವಕನನ್ನು ಬಂಧಿಸಿದ್ದಾರೆ. ಆರೋಪಿ ಸಲ್ಮಾನ್ ಈ ಹಿಂದೆಯೂ ಹಲವು ಬಾರಿ ಇದೇ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
PublicNext
15/08/2022 07:50 am