ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಹಲ್ಲೆ, ಕಿರುಕುಳ ನಡೆಸುತ್ತಿರುವ ಬಗ್ಗೆ ಮಾನವಹಕ್ಕುಗಳ ಕಾರ್ಯಕರ್ತರು ಗಂಭೀರ ಕಳವಳ ವ್ಯಕ್ತಪಡಿಸಿದ ಎರಡನೇ ದಿನವೇ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ ಪ್ರಕರಣ ನಡೆದಿದೆ.
ಹೌದು. ಇಬ್ಬರು ಹಿಂದು ಯುವತಿಯರನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನ ಸೇನೆಗೆ ನಿಕಟವರ್ತಿಯಾಗಿರುವ ಮುಸ್ಲಿಂ ಇಮಾಮ್ ಮಿಯಾನ್ ಅಬ್ದುಲ್ ಖಾಲಿಖ್ ಎಂಬಾತ ಎಕ್ತಾ ಕುಮಾರಿ ಎಂಬ ಹಿಂದೂ ಯುವತಿಯನ್ನು ಬಲವಂತವಾಗಿ ಇಸ್ಲಾಂ ಮತಾಂತರ ಮಾಡಿದ್ದಾನೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಬಲೂಚಿಸ್ತಾನದ ಸಿಬಿ ನಿವಾಸಿ ಅನಿಲ್ ಕುಮಾರ್ ಎಂಬವರ ಮಗಳಾದ ಎಕ್ತಾ ಕುಮಾರಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಎಕ್ತಾ ಕುಮಾರಿಯನ್ನು ಸಿಬಿಯಲ್ಲಿ ವಾಸವಾಗಿರುವ ಸ್ಥಳೀಯ ಮುಸ್ಲಿಂ ಯಾರ್ ಮೊಹಮ್ಮದ್ ಭುಟ್ಟೂ ಅಪಹರಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಆಕೆಯನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯ ಧಾರಾಕಿಯಲ್ಲಿರುವ ದರ್ಗಾ ಎ ಅಲಿಯಾ ಭರಚುಂಡಿ ಷರೀಫ್‌ಗೆ ಭುಟ್ಟೊ ಬಲವಂತದಿಂದ ಕರೆದೊಯ್ಯಲಾಗಿತ್ತು. ನಂತರ ದರ್ಗಾದಲ್ಲಿ ಆಕೆಯನ್ನು ಮಿಯಾನ್ ಇಸ್ಲಾಂಗೆ ಮತಾಂತರಿಸಿ ಆಯೇಷಾ ಎಂದು ಮರುನಾಮಕರಣ ಮಾಡಿ ಭುಟ್ಟೋ ಜತೆ ವಿವಾಹ ಮಾಡಿರುವುದಾಗಿ ವರದಿ ತಿಳಿಸಿದೆ.
ಇಂತಹದ್ದೇ ಮತ್ತೊಂದು ಪ್ರಕರಣದಲ್ಲಿ ಜುಮಾ ಬಜಾರ್ ನಿವಾಸಿ ಧಾನಿ ಕೊಹ್ಲಾಹಿ ಎಂಬ ಹಿಂದು ಯುವತಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ ಮಾಡಿ, ಮುಸ್ಲಿಂ ಯುವಕನ ಜೊತೆ ವಿವಾಹ ನಡೆಸಿರುವುದಾಗಿ ವರದಿ ತಿಳಿಸಿದೆ. ಆಕೆ ಎಲ್ಲಿದ್ದಾಳೆ ಎಂಬುದು ಪೋಷಕರಿಗೆ ಈವರೆಗೂ ಸುಳಿವು ಸಿಕ್ಕಿಲ್ಲ. ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ಕೂಡಾ ದಾಖಲಿಸಿಲ್ಲ ಎಂದು ವರದಿ ತಿಳಿಸಿದೆ.
PublicNext
09/01/2021 08:48 pm