ನವದೆಹಲಿ: ಅಕ್ರಮ ಆಸ್ತಿ ವರ್ಗಾವಣೆ, 200 ಕೋಟಿ ರೂ. ಸುಲಿಗೆ ಪ್ರಕರಣ ಸೇರಿದಂತೆ ಹಲವಾರು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಸುಕೇಶ್ ಚಂದ್ರಶೇಖರ್ ಎಂಬಾತನಿಗೆ ಕಿಸ್ ಕೊಟ್ಟು ಭಾರಿ ವಿವಾದದಲ್ಲಿ ಸಿಲುಕಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ಇಂದಿನಿಂದ ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ಸುಕೇಶ್ ಚಂದ್ರಶೇಖರ್ನಿಂದ ಕೋಟಿ ಕೋಟಿ ರೂಪಾಯಿಗಳ ಬೆಲೆ ಬಾಳುವ ಗಿಫ್ಟ್ ಪಡೆದು ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದಿರುವ ಈ ರಾ…ರಾ… ರಕ್ಕಮ್ಮ ನಟಿ ವಿರುದ್ಧ ಇದಾಗಲೇ ಚಾರ್ಜ್ಷೀಟ್ ಸಲ್ಲಿಕೆ ಮಾಡಲಾಗಿದೆ. ನಟಿಯನ್ನು ಆರೋಪಿಯನ್ನಾಗಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇಂದು ಇವರ ವಿಚಾರಣೆ ನಡೆಸಲಾಗುತ್ತಿದೆ.
ಇವರ ಜತೆ, ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ನನ್ನು ಪರಿಚಯ ಮಾಡಿಸಿ ಇಬ್ಬರ ಸ್ನೇಹ ಸಂಬಂಧ ಮುಂದುವರೆಯುವಂತೆ ಮಾಡಿರುವ ಪಿಂಕಿ ವಿರುದ್ಧ ಇದಾಗಲೇ ಅನುಮಾನಗಳ ಹುತ್ತ ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ ಇವರ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ. ಬೆಳಗ್ಗೆ 11:30 ರಿಂದ ವಿಚಾರಣೆ ಆರಂಭವಾಗಿದ್ದು, ರಾತ್ರಿ 8:30 ವರೆಗೆ ವಿಚಾರಣೆ ನಡೆಯುವ ಸಾಧ್ಯತೆಗಳಿದೆ. ಒಟ್ಟು ಮೂರು ಹಂತಗಳಲ್ಲಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಆರೋಪಿ ಸುಕೇಶ್ನೊಂದಿಗಿನ ನಟಿ ಜಾಕ್ವೆಲಿನ್ ಹೊಂದಿರುವ ಸಂಬಂಧ, ಅವರಿಂದ ಪಡೆದ ಉಡುಗೊರೆ, ಸುಕೇಶ್‌ನನ್ನು ಎಷ್ಟು ಬಾರಿ ಭೇಟಿಯಾಗಿದ್ದರು, ಫೋನ್‌ನಲ್ಲಿ ಎಷ್ಟು ಬಾರಿ ಸಂಪರ್ಕಿಸಿದ್ದರು ಎಂಬ ಬಗ್ಗೆ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ
ಸುಕೇಶ್ ಜತೆ ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿರುವುದಾಗಿ ಆರೋಪ ಕೇಳಿಬಂದಿತ್ತು. ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಇಬ್ಬರೂ ಕಿಸ್ ಮಾಡುತ್ತಿರುವ ಫೋಟೋ ವೈರಲ್ ಆಗಿ ನಟಿ ಕೂಡ ಈಗ ವಿಚಾರಣೆ ಎದುರಿಸುವಂತಾಗಿದೆ. ಇದರ ಆಳಕ್ಕೆ ಹೋಗಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಈ ಸುಕೇಶ್ ಕುರಿತಂತೆ ಇನ್ನಷ್ಟು ಮಾಹಿತಿ ಸಿಕ್ಕಿತ್ತು. ಆತ ಜಾಕ್ವೆಲಿನ್ ಮಾತ್ರವಲ್ಲದೇ ಕೆಲವು ನಟಿಯರನ್ನು ಹೇಗೆ ಬಲೆಗೆ ಬೀಳಿಸಿಕೊಂಡ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು.
200 ಕೋಟಿ ರೂ. ಸುಲಿಗೆ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ ಎಂದು ಇದಾಗಲೇ ನಟಿ ಜಾಕ್ವೆಲಿನ್ ಇದಾಗಲೇ ಹೇಳಿದ್ದಾರೆ. ಆದರೆ ತನಿಖೆ ಕೈಗೊಂಡಿರುವ ಪೊಲೀಸರಿಗೆ ಈಕೆಯ ವಿರುದ್ಧವೂ ಕೆಲವೊಂದು ದಾಖಲೆಗಳು ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ಆರೋಪಿಯನ್ನಾಗಿಸಲಾಗಿದೆ.
ಸುಕೇಶ್ ಚಂದ್ರಶೇಖರ್, ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾ ಅವರ ಕುಟುಂಬದಿಂದ ತಾನು ಬಂದವನು ಎಂದು ಹೇಳಿಕೊಂಡಿದ್ದ ಈ ಸುಕೇಶ್ ಚಂದ್ರಶೇಖರ್ ಜಾಕ್ವೆಲಿನ್ ಜತೆ ಸ್ನೇಹ ಬೆಳೆಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಚೇರಿ ಸಂಖ್ಯೆಯನ್ನು ನಕಲು ಮಾಡಿ ಜಾಕ್ವೆಲಿನ್ ಅವರನ್ನು ಸಂಪರ್ಕಿಸಿದ್ದಾನೆ. ನಂತರ ಆಕೆಯ ಸ್ನೇಹ ಬೆಳೆಸಿದ್ದಾನೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಜಾಕ್ವೆಲಿನ್ ಅವರ ಹೇಳಿಕೆಯನ್ನೂ ಪಡೆದುಕೊಳ್ಳಲಾಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ. ನಾನು ಜಯಲಲಿತಾ ಕುಟುಂಬಸ್ಥ, ಚೆನ್ನೈನಲ್ಲಿ ವಾಸವಾಗಿದ್ದೇನೆ’ ಎಂದು ಈತ ಜಾಕ್ವೆಲಿನ್‌ಗೆ ಹೇಳಿದ್ದಾನೆ. ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
PublicNext
14/09/2022 06:04 pm