ಬೆಂಗಳೂರು: ಬಾಳಿ ಬದುಕಬೇಕಾದ ಬಾಲೆಯ ಬದುಕು ಬೀದಿ ಕಾಮಾಂಧರ ಕೈಗೆ ಸಿಕ್ಕು ಕಮರಿ ಹೋಗಿರುವ ಘಟನೆ ನೀಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ.
ಮಂಡ್ಯದ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನ ಗದ್ದೆಯಲ್ಲಿ ಕೊಲೆಯಾಗಿದ್ದ ಅಪ್ರಾಪ್ತ ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಈ ಪ್ರಕರಣದಲ್ಲಿ ಬಾಲಕಿಗೆ ನ್ಯಾಯ ಸಿಗುತ್ತದೆ ಮತ್ತು ತಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಮುಂದೆ ಈ ರೀತಿ ಮಾಡುವವರಿಗೆ ತೀವ್ರ ತರಹದ ಸಂದೇಶ ರವಾನೆಯಾಗಲಿದೆ ಎಂದು ಭಾವಿಸಿದ್ದೇನೆ.
ಈ ಮೂಲಕ ಮುಂದೆ ಈ ರೀತಿ ಕ್ರೂರ ಕೃತ್ಯ ಮಾಡಲು ಯೋಚಿಸುವವರಿಗೆ ಒಂದು ಎಚ್ಚರಿಕೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಮೂಲತಃ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಿವಾಸಿ ಈ ಬಾಲಕಿ. ಕುಟುಂಬಸ್ಥರ ಜೊತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗ್ರಾಮಕ್ಕೆ ಬಂದಿದ್ದಳು.
ಕಬ್ಬು ಕಟಾವಿಗೆ ಬಾಲಕಿ ಗದ್ದೆಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನ ಎಳೆದೊಯ್ದ ಕಾಮುಕ ಕಿರಾತಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.
ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ಆಕೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದು ಶವವನ್ನು ಕಬ್ಬಿನ ಗದ್ದೆಯಲ್ಲಿ ಎಸೆದು ಹೋಗಿದ್ದರು.
ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿ ಕೊಲೆಯಾದ ಅದೇ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದನು.
ಅನುಮಾನದ ಮೇರೆಗೆ ಅಪ್ರಾಪ್ತನನ್ನ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಮೊದಲಿಗೆ ಯಾರೋ ಇಬ್ಬರು ಬಾಲಕಿಯನ್ನು ಎಳೆದುಕೊಂಡು ಹೋಗುತ್ತಿದ್ದಾಗ ನಾನು ಆಕೆಯನ್ನ ಬಿಡಿಸಲು ಹೋಗಿದ್ದೆ. ನಂತರ ಭಯವಾಗಿ ಗದ್ದೆಯಲ್ಲಿ ಅವಿತು ಕುಳಿತಿದ್ದೆ ಎಂದು ಹೇಳಿದ್ದನು.
ಅಪ್ರಾಪ್ತನ ನಡವಳಿಕೆ ಬಗ್ಗೆ ಮೃತ ಬಾಲಕಿಯ ಸಂಬಂಧಿಕರು ಶಂಕೆ ವ್ಯಕ್ತಪಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.
PublicNext
04/12/2020 08:50 pm