ನವದೆಹಲಿ: ಮನೆಗೆ ಬಾಡಿಗೆದಾರನಾಗಿ ಬಂದ ವ್ಯಕ್ತಿ ನನ್ನನ್ನು ಇಷ್ಟ ಪಟ್ಟು ಲೈಂಗಿಕ ಸಂಪರ್ಕ ಬೆಳೆಸಿ, ತದನಂತರ ಮದುವೆ ಮಾಡಿಕೊಂಡು ಇದೀಗ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸುತ್ತಿದ್ದಾನೆ ಎಂದು ನೊಂದ ಯುವತಿ ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ದೆಹಲಿ ನಗರದಲ್ಲಿ ವಾಸವಾಗಿದ್ದ ತನ್ನ ಮನೆಗೆ ಸಾಹಿಬ್ ಅಲಿ (20) ಎಂಬ ವ್ಯಕ್ತಿ ಬಾಡಿಗೆದಾರನಾಗಿ ಸೇರಿಕೊಂಡಿದ್ದ. ಈ ವೇಳೆ ಆತ ತನ್ನನ್ನು ರಾಹುಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡಿದ್ದಾನೆ. ದಿನಕಳೆದಂತೆ ಸರಿತಾ ಹಾಗೂ ಆತನ ನಡುವೆ ಸ್ನೇಹ ಬೆಸೆದುಕೊಂಡಿದೆ. ಕೆಲ ದಿನಗಳ ನಂತರ ಪ್ರೇಮದ ನಾಟಕವಾಡಿದ್ದಾನೆ. ನಂತರ ಇಬ್ಬರ ನಡುವೆ ದೈಹಿಕ ಸಂಪರ್ಕವೂ ಆಗಿದೆ. ಇದಾದ ಮೇಲೆ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತನ್ನ ನೈಜ ಹೆಸರನ್ನು ಮುಚ್ಚಿಟ್ಟಿದ್ದ ಯುವಕ, ಆತನ ತಂದೆ, ತಾಯಿ, ಸಹೋದರ, ಸಹೋದರಿಗೆ ಪರಿಚಯಿಸಿ, ಕೊಟ್ಟ ಮಾತಿನಂತೆ ಮದುವೆಯಾಗಿದ್ದಾನೆ.
ಮದುವೆಯಾದ ಕೆಲ ತಿಂಗಳ ಬಳಿಕ ನೈಜತೆ ತೋರಿದ ಸಾಹಿಬ್, ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಯುವತಿಯನ್ನು ಹಿಂಸಿಸುತ್ತಿದ್ದ ಎನ್ನಲಾಗಿದೆ. ಸಾಹಿಬ್ ಅಲಿ ಮನೆಗೆ ತಾನು ಬಂದಾಗಲೂ ಸಹ ಆತನ ಕುಟುಂಬಸ್ಥರು ತನಗೆ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಸಾಹಿಬ್ ಅಲಿ ಅಲಿಯಾಸ್ ರಾಹುಲ್ ಅವರ ತಂದೆ ಹಜಿಸುನ್ನಾಲಾ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ), 366 (ಅಪಹರಣ ಅಥವಾ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸುವುದು), 354 (ಮಹಿಳೆಯ ಮೇಲೆ ಹಲ್ಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
PublicNext
24/12/2020 02:10 pm