ಕಲಬುರಗಿ: ಹೊಲ ಮನೆಗಾಗಿ ಕೊಲೆಯಾಗಿರುವ ಬಗ್ಗೆ ಕೇಳಿರುತ್ತೇವೆ ಆದ್ರೆ ಇಲ್ಲಿ ಎರಡು ತಲೆ ಅಥವಾ ಮಣ್ಣುಮುಕ್ಕ ಹಾವಿಗಾಗಿ ಕೊಲೆ ನಡೆದು ಹೋಗಿದೆ.
ಇನ್ನು ಈ ಕೊಲೆ ಆರೋಪದಲ್ಲಿ ತಂದೆ-ಮಗನನ್ನು ಕಲಬುರಗಿಯ ಕಮಲಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತಂದೆ ರಾಮಚಂದ್ರ ಚಿಲಾನೋರ ಮತ್ತು ಮಗ ಭರತ್ ಚಿಲಾನೋರ ಎಂದು ಗುರುತಿಸಲಾಗಿದೆ.
ನವೆಂಬರ್ 4ರಂದು ಬೀದರ್ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ಕೊಡಂಬಲ ಗ್ರಾಮದ ನಿವಾಸಿ ಸಿದ್ರಾಮಪ್ಪ ಸಾಸರವಗ್ಗೆ ಎಂಬಾತನನ್ನು ತಂದೆ-ಮಗ ಸೇರಿ ಕೊಲೆ ಮಾಡಿದ್ದರು.
ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಮುಲ್ಲಾಮಾರಿ ಹಳ್ಳದಲ್ಲಿ ಸಿದ್ರಾಮಪ್ಪ ಶವವಾಗಿ ಪತ್ತೆಯಾಗಿತ್ತು.
ಸ್ನೇಹಿತರಾಗಿದ್ದ ಸಿದ್ರಾಮಪ್ಪ ಹಾಗೂ ರಾಮಚಂದ್ರ ಎರಡು ತಲೆ ಹಾವು ತಂದಿದ್ದರು.
ಅದನ್ನು ಸಿದ್ರಾಮಪ್ಪ, ರಾಮಣ್ಣನ ಮನೆಯಲ್ಲೇ ಇಟ್ಟಿದ್ದ. ಆದರೆ, ಸಿದ್ರಾಮಪ್ಪನಿಗೆ ತಿಳಿಯದ ಹಾಗೆ ಹಾವನ್ನು ಶ್ರೀಮಂತ ಎಂಬಾತನಿಗೆ ರಾಮಣ್ಣ ಮಾರಿದ್ದ.
ನವೆಂಬರ್ 4ರಂದು ರಾಮಚಂದ್ರ ಮನೆಗೆ ತೆರಳಿದ ಸಿದ್ರಾಮಪ್ಪ ಹಾವು ಕೊಡುವಂತೆ ಗಲಾಟೆ ತೆಗೆದಿದ್ದ.
ಹಾವು ಕೊಡುವುದಕ್ಕೆ ಹಿಂದೇಟು ಹಾಕಿದ್ದ ರಾಮಣ್ಣನಿಗೆ ಸಿದ್ರಾಮಪ್ಪ ಆವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಕೋಪಗೊಂಡ ರಾಮಣ್ಣನ ಮಗ ಭರತ್ ಚಾಕುವಿನಿಂದ ಸಿದ್ರಾಮಪ್ಪನ ಕತ್ತಿಗೆ ಇರಿದಿದ್ದ.
ಬಳಿಕ ರಾಮಣ್ಣ ಸಹ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದ.
ಇದಾದ ಬಳಿಕ ಸಿದ್ರಾಮಪ್ಪನ ಶವವನ್ನು ರಾಮಣ್ಣ ಹಾಗೂ ಆತನ ಮಗ ಕೌದಿಯಲ್ಲಿ ಕಟ್ಟಿ ಹಳ್ಳದ ಸೇತುವೆ ಬಳಿ ಬಿಸಾಕಿದ್ದರು.
ಅಪರಿಚಿತ ಶವ ಪತ್ತೆ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಕಮಲಾಪುರ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.
PublicNext
10/12/2020 08:55 am