ಬೆಂಗಳೂರು: ಪತ್ನಿಗೆ ಗುಂಡಿಕ್ಕಿ ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಬಸವೇಶ್ವರ ನಗರದಲ್ಲಿ ಘಟನೆ ನಡೆದಿದ್ದು, ಆರೋಪಿ ಕಲ್ಲಪ್ಪ ತನ್ನ ಪತ್ನಿ ಸುಮಿತ್ರಾ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಸಿಂಗಲ್ ಬ್ಯಾರೆಲ್ ಗನ್‍ನಿಂದ ಗುಂಡಿಕ್ಕಿ ಕಲ್ಲಪ್ಪ ಪತ್ನಿಯನ್ನು ಹತ್ಯೆಗೈದಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಜಿಎಂಎಸ್ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಎಟಿಎಂಗಳಿಗೆ ಹಣ ತುಂಬುತ್ತಿದ್ದ ವಾಹನಗಳಲ್ಲಿ ಆರೋಪಿ ಕಲ್ಲಪ್ಪ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಕೆಲ ದಿನಗಳಿಂದ ಆರೋಪಿ ಕೆಲಸ ಕಳೆದುಕೊಂಡಿದ್ದ. ಇದರಿಂದ ಹತಾಶನಾಗಿ ಕುಡಿತಕ್ಕೆ ಶರಣಾಗಿದ್ದ. ಹಲವು ದಿನಗಳಿಂದ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಇದೇ ವಿಚಾರವಾಗಿ ಆಗಾಗ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಅದೇ ರೀತಿ ಇಂದು ಸಹ ಜಗಳ ತಾರಕಕ್ಕೇರಿ ಸಿಟ್ಟಿಗೆದ್ದ ಕಲ್ಲಪ್ಪ ಬಂದೂಕಿನಿಂದ ಪತ್ನಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಹತ್ಯೆಗೈದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/11/2020 09:43 pm