ಮೈಸೂರು : ತಾಯಿ ಮಕ್ಕಳ ಈ ಪೋಟೊ ನೋಡಿದಾಗ ಯಾರಿಗೆ ಮುದ ನೀಡುವುದಿಲ್ಲ ಹೇಳಿ? ಆದರೆ ಕುಟುಂಬ ದೂರದ ಐರ್ಲೆಂಡಿನಲ್ಲಿ ದಾರುಣ ಹತ್ಯೆಗೊಳಗಾಗಿದೆ ಎಂಬ ಸುದ್ದಿ ಎಂತಹ ಕಲ್ಲು ಹೃದಯವನ್ನೂ ಕರಗಿಸುತ್ತದೆ. ಈಕೆ ಮೈಸೂರಿನ ಸೀಮಾ ಬಾನು ಸೈಯ್ಯದ್ ( 37) ಪುತ್ರಿ ಅಸ್ಫಿರಾ ರಿಝಾ ( 11 ) ಪುತ್ರ ಫಯಾಜ್ ಸೈಯ್ಯದ್ ( 6 ) ಐರ್ಲೆಂಡಿನ ಬ್ಯಾಲೆಂಟೀನ್ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ಅಮಾನುಷ ರೀತಿಯಲ್ಲಿ ಕೊಲೆಯಾಗಿದ್ದಾರೆ.
ಮನೆಯ ಒಂದು ರೂಮಿನಲ್ಲಿ ಮಹಿಳೆಯ ರಕ್ತ ಸಿಕ್ತ ಶವ ದೊರೆತರೆ ಇನ್ನೊಂದು ರೂಮಿನಲ್ಲಿ ಇಬ್ಬರೂ ಮಕ್ಕಳು ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಕಳೆದ ಐದು ದಿನಗಳಿಂದ ಮಹಿಳೆ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಾರದಿರುವುದನ್ನು ಕಂಡು ಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದಾಗ ಕೊಲೆ ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.
ಮಹಿಳೆ ಪತಿ ಸಮೀರ್ ಸೈಯ್ಯದ್ ಕೆಲಸ ನಿಮಿತ್ತ ಐರ್ಲೆಂಡ್ ದಿಂದ ಹೊರಗೆ ಇದ್ದು, ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದುಬೈದಲ್ಲಿ ವಾಸಿಸುತ್ತಿದ್ದ ಸೈಯ್ಯದ್ ಕುಟುಂಬ ಕಳೆದ ಫೆಬ್ರವರಿಯಲ್ಲಿ ಐರ್ಲೆಂಡ್ ಗೆ ತೆರಳಿತ್ತು ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸಿ ಸಂಶಯದ ಮೇಲೆ, ಈ ಕುಟುಂಬಕ್ಕೆ ಹತ್ತಿರದ ವ್ಯಕ್ತಿಯೊಬ್ಬನ ಶೋಧ ಆರಂಭಿಸಿದ್ದಾರೆ.
ಪತಿ ಸೈಯ್ಯದ ಬಂದ ಮೇಲೆ ಕೊಲೆಗೆ ಕಾರಣಗಳೇನು ಎಂಬುದು ಸ್ಪಷ್ಟವಾಗಬಹುದೆಂದು ಹೇಳಲಾಗುತ್ತಿದೆ.
ತಮ್ಮ ಮಗಳು ಹಾಗೂ ಮೊಮ್ಮಕ್ಕಳ ಭೀಕರ ಕೊಲೆ ವಿಷಯವನ್ನು ತಿಳಿದು ಮೈಸೂರಿನಲ್ಲಿರುವ ಮಹಿಳೆ ಪಾಲಕರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹೇಗಾದರೂ ಮಾಡಿ ಮಗಳು ಹಾಗೂ ಮೊಮ್ಮಕ್ಕಳ ಶವ ತಮಗೆ ತಲುಪಿಸಿ, ನಾವೇ ಅಂತ್ಯಕ್ರಿಯೆ ನಡೆಸುತ್ತೇವೆ ಎಂದು ಗೋಗರೆಯುತ್ತಿದ್ದಾರೆ. ಆದರೆ ಶವಗಳನ್ನು ಭಾರತಕ್ಕೆ ಹಾಗೂ ಮೈಸೂರಿಗೆ ಕಳುಹಿಸಲು ಸುಮಾರು 15 ಲಕ್ಷ ವೆಚ್ಚವಾಗುವುದೆಂದು ಅಲ್ಲಿಯ ಪೊಲೀಸರು ತಿಳಿಸಿದ್ದಾರೆ.
ಹೇಗಾದರೂ ಮಾಡಿ ಕೊನೆಯ ಬಾರಿ ಅವರ ಮುಖ ನೋಡಲು ಅವಕಾಶ ಮಾಡಿಕೊಡಿ ಎಂದು ಬಡ ಕುಟುಂಬ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಪರಿಪರಿಯಾಗಿ ಮನವಿ ಮಾಡಿಕೊಳ್ಳುತ್ತಿದೆ. ಐರ್ಲೆಂಡ್ ದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ರಾಜ್ಯ ಸರಕಾರ ಯಾವ ರೀತಿ ಸ್ಪಂದಿಸುವುದೆಂದು ನೋಡಬೇಕು.
PublicNext
01/11/2020 08:19 am