ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆಯಲ್ಲಿ ಯುವಕನೊಬ್ಬ ಸ್ನೇಹಿತನನ್ನೇ ಕೊಲೆಗೈದ ಘಟನೆ ಆನೇಕಲ್ ತಾಲೂಕಿನ ಯಾರಂಡಳ್ಳಿಯಲ್ಲಿ ನಡೆದಿದೆ.
ವಿಕಾಸ್ ಕೊಲೆಯಾದ ಯುವಕ. ಆರೋಪಿ ಪೀಟರ್ ಕುಡಿದ ಮತ್ತಿನಲ್ಲಿ ತನ್ನ ಗೆಳೆಯ ವಿಕಾಸ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇಬ್ಬರು ಇಟ್ಟಿಗೆ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಸ್ನೇಹಿತರಾಗಿದ್ದರು. ಶುಕ್ರವಾರ ಸಂಜೆ ಒಟ್ಟಿಗೆ ಕುಳಿತು ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ಪೀಟರ್ ಕೋಪದಲ್ಲಿ ವಿಕಾಶ್‍ನ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಚೂಪಾದ ಚಾಕುವಿನಿಂದ ಇರಿದಿದ್ದಾನೆ. ಪರಿಣಾಮ ವಿಕಾಶ್ ತೀವ್ರ ಗಾಯಗಳಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಆರೋಪಿ ಪೀಟರ್‌ನನ್ನು ಬಂಧಿಸಿರುವ ಪೊಲೀಸರು ವಿಕಾಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
10/10/2020 04:07 pm