ಜೈಪುರ: ದೇವಸ್ಥಾನವೊಂದರ ಪೂಜಾರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದ ಅಮಾನವೀಯ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಸಂಭವಿಸಿದೆ. ಈ ವಿಚಾರವಾಗಿ ಮೌನವಾಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರೆ ಸಂಜು ವರ್ಮಾ, ಈ ಘಟನೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಯಾಕೆ ಮೌನವಾಗಿದ್ದಾರೆ. ಕಾಂಗ್ರೆಸ್ ಆಡಳಿತರೂಢ ರಾಜ್ಯದಲ್ಲಿ ಇಂತಹ ಘಟನೆ ನಡೆದರೆ ಮೌನವಾಗಿಯೇ ಇರುತ್ತಾರೆ ಎಂದು ಕಿಡಿಕಾರಿದ್ದಾರೆ.
ಏನಿದು ಪ್ರಕರಣ: ಕರೌಲಿ ಜಿಲ್ಲೆಯ ಬುಕ್ನಾ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿನ ದೇವಾಲಯವೊಂದರ ಪೂಜಾರಿ, 55 ವರ್ಷದ ಬಾಬು ಲಾಲ್ ವೈಷ್ಣವ್ ಎಂಬವರ ಮೇಲೆ ದುಷ್ಕರ್ಮಿಗಳ ಗಂಪು ಬೆಂಕಿ ಹಚ್ಚಿತ್ತು. ದೇಹದ ಬಹುತೇಕ ಭಾಗ ಸುಟ್ಟಿ ಗಂಭೀರ ಸ್ಥಿತಿಯಲ್ಲಿದ್ದ ಬಾಬು ಲಾಲ್ ವೈಷ್ಣವ್ ಅವರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಬಾಬು ಲಾಲ್ ಗುರುವಾರ ರಾತ್ರಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಪ್ರಕರಣದ ಸಂಬಂಧ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದೆ. ಉಳಿದ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
PublicNext
09/10/2020 04:14 pm