ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕೆಬಿಸಿ'ಯಲ್ಲಿ 5 ಕೋಟಿ ರೂ. ಗೆದ್ದ ನಂತರ ಪ್ರಪಾತಕ್ಕೆ ಬಿದ್ದ ಬದುಕು: ದಾಂಪತ್ಯ ಮುರಿದುಹೋಯ್ತು.!- ಜೀವನ ಕತೆ ತೆರೆದಿಟ್ಟ ಸುಶೀಲ್

ಮುಂಬೈ: ಕೆಲವರಿಗೆ ದುಡ್ಡೇ ದೊಡ್ಡದಾಗಿರುತ್ತದೆ. ದುಡ್ಡಿನಿಂದ ಏನು ಬೇಕಾದರೂ ಖರೀದಿಸಬಹುದು ಎಂಬಂತೆ ವರ್ತಿಸುತ್ತಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಐದು ಕೋಟಿ ರೂಪಾಯಿ ಬಹುಮಾನ ಗೆದ್ದು ಬದುಕನ್ನು ನರಕ ಮಾಡಿಕೊಂಡು ದುಡ್ಡಿನ ಸಹವಾಸವೇ ಬೇಡ ಎನ್ನುತ್ತಿರುವ ಈ ಕರೋಡ್​ಪತಿ ಕಥೆ ಕೇಳಿ.

ಬಾಲಿವುಡ್​ನ ಬಿಗ್​ಬಿ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್​ಪತಿ'ಯಲ್ಲಿ ಮೊದಲ ಬಾರಿಗೆ 5 ಕೋಟಿ ರೂ. ಗೆದ್ದ ಸ್ಪರ್ಧಿಯ ಹೆಸರು ಸುಶೀಲ್ ಕುಮಾರ್. ಅವರು ಕಳೆದ ವರ್ಷ ಹಂಚಿಕೊಂಡಿದ್ದ ಒಂದು ಪೋಸ್ಟ್ ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ಅವರು ಕೋಟ್ಯಾಧಿಪತಿಯ ಒಡೆಯನಾಗಿದ್ದರಿಂದ ರಾತ್ರೋ ರಾತ್ರಿ ಲಭಿಸಿದ ಪ್ರಸಿದ್ಧಿ ಅವರ ಬದುಕಿನಲ್ಲಿ ಎಂತಹ ಅನಾಹುತವನ್ನು ಸೃಷ್ಟಿಸಿತ್ತು ಎಂಬುದನ್ನು ಬರೆದುಕೊಂಡಿದ್ದರು. 2011ರ 'ಕೆಬಿಸಿ' ಶೋನಲ್ಲಿ ಗೆದ್ದ ನಂತರ ಹಣವನ್ನು ಉದ್ಯಮಕ್ಕಾಗಿ ಬಳಸಿದ್ದು, ಸಹವರ್ತಿಗಳಿಂದ ಸತತವಾಗಿ ಮೋಸಕ್ಕೊಳಗಾಗಿದ್ದು ಹಾಗೂ ಅದರಿಂದ ಕುಡಿತದ ದಾಸನಾಗಿದ್ದು, ಈ ಎಲ್ಲಾ ಕಾರಣಗಳಿಂದ ಕುಟುಂಬ ದೂರವಾಗಿದ್ದು. ಈ ಘಟನೆಗಳನ್ನು ಅವರು ಪೋಸ್ಟ್ ಮೂಲಕ ಹಂಚಿಕೊಂಡಿದ್ದರು.

ಸುಶೀಲ್ ಕುಮಾರ್ ಕತೆ ಇಲ್ಲಿದೆ ಕೇಳಿ:

'ಕೌನ್ ಬನೇಗಾ ಕರೋಡ್‌ಪತಿ ಗೆದ್ದ ಬಳಿಕ ನನ್ನ ಬದುಕಿನ ಅತ್ಯಂತ ಕೆಟ್ಟ ಕಾಲ' ಎಂಬ ಶೀರ್ಷಿಕೆಯಡಿಯಲ್ಲಿ ಸುಶೀಲ್ ಕುಮಾರ್ ತಮ್ಮ ಅನುಭವ ಬಿಚ್ಚಿಟ್ಟಿದ್ದಾರೆ. "2015-16 ನನ್ನ ಜೀವನದ ಸವಾಲಿನ ಕಾಲಘಟ್ಟ ಆಗಿತ್ತು. ನನಗೆ ಏನು ಮಾಡಬೇಕು ಎಂಬುದೇ ಗೊತ್ತಾಗಿರಲಿಲ್ಲ. ಲೋಕಲ್‌ ಸೆಲೆಬ್ರಿಟಿಯಾಗಿ ತಿಂಗಳಿಗೆ 10ರಿಂದ 15 ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಅದರಿಂದಾಗಿ ನನಗೆ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮದಲ್ಲಿ ನೀವೇನು ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದರು. ಆದರೆ ಆ ಸಮಯದಲ್ಲಿ ನಾನೇನೂ ಮಾಡುತ್ತಿರಲಿಲ್ಲ. ಆದ್ದರಿಂದ ಸುಳ್ಳು ಹೇಳಬೇಕಾಗಿ ಬಂತು".

ಇದೇ ಕಾರಣದಿಂದ ನಾನು ಯಾವುದಾದರೂ ವ್ಯವಹಾರದಲ್ಲಿ ಕೈಹಾಕುವ ಯೋಚನೆ ಮಾಡಿದೆ. ಏಕೆಂದರೆ ನನ್ನ ಬಳಿ ಇಷ್ಟೊಂದು ಹಣವಿತ್ತಲ್ಲ. ಆದರೆ ನನ್ನ ದುರದೃಷ್ಟ. ಕೆಲವು ವ್ಯವಹಾರದಲ್ಲಿ ಹೂಡಿಕೆ ಮಾಡಿದರೂ ಅದು ನನ್ನ ಕೈಹಿಡಿಯಲಿಲ್ಲ. ಕೆಲವೊಬ್ಬರಿಗೆ ಇದೇ ಸಮಯದಲ್ಲಿ ದಾನವನ್ನೂ ಮಾಡಿದೆ. ಕೈಯಲ್ಲಿ ಕೆಲಸವಿರಲಿಲ್ಲ. ಮಾಡಿದ್ದೆಲ್ಲ ನಷ್ಟದ ಹಾದಿ ಹಿಡಿದವು. ಕೈಯಲ್ಲಿದ್ದ ದುಡ್ಡು ಖರ್ಚಾಗತೊಡಗಿತು.

ಈ ನಡುವೆಯೇ ನಾನು ದಿಕ್ಕೇ ತೋಚದಂತಾಗಿ ಕುಳಿತುಬಿಟ್ಟೆ. ಇದೇ ಸಮಯದಲ್ಲಿ ಹೆಂಡತಿ ಜತೆಗಿನ ಸಂಬಂಧ ಹದಗೆಟ್ಟಿತು. ಇದರಿಂದ ವಿಪರೀತ ಮದ್ಯಪಾನ ದಾಸನಾಗಿಬಿಟ್ಟೆ. ನಂತರ ಚಿತ್ರರಂಗಕ್ಕೆ ಕೈಹಾಕುವ ಯೋಚನೆ ಮಾಡಿದೆ. ಚಲನಚಿತ್ರಗಳಲ್ಲಿ ನಿರ್ದೇಶಕರಾಗಲು ಮುಂಬೈಗೆ ಬಂದರು, ಆದರೆ ಮೊದಲು ಟಿವಿಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಸಲಹೆ ನೀಡಿದರು ಕೆಲವರು. ಆದರೆ ಅದು ಕೂಡ ಕೈಗೂಡಲಿಲ್ಲ. ಆದ್ದರಿಂದ ದಿಕ್ಕೇ ತೋಚದಂತಾಗಿ ಎಲ್ಲಾ ಚಟಗಳೂ ನನ್ನನ್ನು ಮುತ್ತಿಕೊಂಡುಬಿಟ್ಟವು

ನಂತರ ದೆಹಲಿಯಲ್ಲಿ ಕಾರುಗಳನ್ನು ಓಡಿಸಲು ಆರಂಭಿಸಿದೆ. ಅಲ್ಲಿಂದ ನನ್ನಂಥ ಕೆಟ್ಟ ಚಟದವರೇ ಸ್ನೇಹಿತರಾದರು. ಇದನ್ನೆಲ್ಲಾ ಸಹಿಸದ ನನ್ನ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಳು. ನಾನು ಹೇಗಿದ್ದೆ, ಹೇಗಾದೆ ಎಂಬ ಬಗ್ಗೆ ಮುಂಬೈನಲ್ಲಿ ಗೆಳೆಯನ ಅಪಾರ್ಟ್‌ಮೆಂಟ್‌ನಲ್ಲಿ ಒಂಟಿಯಾಗಿ ಕುಳಿತಾದ ಸುದೀರ್ಗವಾಗಿ ಯೋಚಿಸಿದೆ. ಆಗಲೇ ಬದುಕು ಅರ್ಥವಾಯಿತು. ನನ್ನ ಬದುಕು ಕೂಡ ಬದಲಾಯಿತು. ನಾನು ಸಮಸ್ಯೆಗಳನ್ನು ಎದುರಿಸುವ ಬದಲು ಅವುಗಳಿಂದ ದೂರ ಓಡಿಹೋಗುತ್ತಿದ್ದೇನೆ ಎಂದು ತಿಳಿಯಿತು. ನಾನು ಅಹಂಕಾರಿ ಆಗಿದ್ದೆ ಎಂಬುದು ಅರಿವಾಯಿತು. ಅದರ ಬದಲು ಒಳ್ಳೆಯ ವ್ಯಕ್ತಿಯಾಗಿ ಇರಬೇಕು ಎನಿಸಿತು.

ಮತ್ತೆ ಹಳ್ಳಿಗೆ ವಾಪಸಾದೆ. ಅಲ್ಲಿ ಶಿಕ್ಷಕನಾಗಿ ಮತ್ತು ಪರಿಸರವಾದಿಯಾಗಿ ಕೆಲಸ ಶುರು ಮಾಡಿದರು. ಇದರಿಂದ ಈಗ ನನಗೆ ನೆಮ್ಮದಿ ಸಿಕ್ಕಿದೆ. ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಬಿಟ್ಟಿದ್ದೇನೆ. ಪ್ರತಿ ದಿನ ಹೊಸ ಹುರುಪಿನೊಂದಿಗೆ ಎದ್ದೇಳುತ್ತೇನೆ. ನನ್ನಿಂದ ಪರಿಸರದ ಸೇವೆ ಆಗಲಿ ಅಂತ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಫೇಸ್‌ಬುಕ್‌ನಲ್ಲಿ ಸುಶೀಲ್‌ ಬರೆದುಕೊಂಡಿದ್ದಾರೆ.

ನಿಮ್ಮ ಹೃದಯವು ಏನು ಮಾಡಲು ಬಯಸುತ್ತದೆಯೋ ಅದನ್ನು ಮಾಡುವುದರಲ್ಲಿ ನಿಜವಾದ ಸಂತೋಷವಿದೆ. ನಿಮ್ಮ ಅಹಂಕಾರವನ್ನು ನೀವು ಎಂದಿಗೂ ಶಾಂತಗೊಳಿಸಲು ಸಾಧ್ಯವಿಲ್ಲ. ಪ್ರಸಿದ್ಧ ಮನುಷ್ಯನಿಗಿಂತ ಉತ್ತಮ ಮನುಷ್ಯನಾಗುವುದು ಸಾವಿರ ಪಟ್ಟು ಉತ್ತಮ ಎಂದಿದ್ದಾರೆ. ಕೌನ್​ ಬನೇಗಾ ಕರೋಡ್​ಪತಿಯ ಸೀಜನ್​ 13 ಶುರುವಾಗುತ್ತಿರುವ ಬೆನ್ನಲ್ಲೇ ಸುಶೀಲ್​ಕುಮಾರ್​ ಅವರ ಈ ಫೇಸ್​ಬುಕ್​ ಸಂದೇಶ ಪುನಃ ವೈರಲ್​ ಆಗುತ್ತಿದೆ.

Edited By : Vijay Kumar
PublicNext

PublicNext

23/08/2021 08:32 am

Cinque Terre

41.17 K

Cinque Terre

2