ಬೆಂಗಳೂರು: ಕನ್ನಡದ ಮೇರು ನಟರಲ್ಲಿ ಒಬ್ಬರಾದ ವಿಷ್ಣುವರ್ಧನ್ ಬಗ್ಗೆ ತೆಲುಗು ನಟ ವಿಜಯ್ ರಂಗರಾಜು ಅವಹೇಳನವಾಗಿ ಮಾತನಾಡಿರುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿದ್ದು, ಕನ್ನಡಿಗರನ್ನು ಕೆರಳಿಸಿದೆ.
ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ತೆಲುಗು ನಟ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ಸ್ಯಾಂಡಲ್ವುಡ್ ನಟರಂತೂ ನಟ ವಿಜಯ್ ರಂಗರಾಜು ವಿರುದ್ಧ ಗರಂ ಆಗಿದ್ದು, ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಶ್ರೀಮುರಳಿ, ಗಣೇಶ್, ಸೃಜನ್ ಲೋಕೇಶ್, ರಿಷಬ್ ಶೆಟ್ಟಿ ಸೇರಿದಂತೆ ಪ್ರಮುಖರು ಕೂಡಲೇ ವಿಜಯ್ ರಂಗರಾಜು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ನಟ ವಿಜಯ ರಂಗರಾಜು ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.
ವಿಷ್ಣುವರ್ಧನ್ ಅವರ ಬಗ್ಗೆ ನಾನು ಮಾತನಾಡಿರುವುದು ತಪ್ಪು. ವಿಷ್ಣುದಾದಾ ಬಗ್ಗೆ ನಾನು ಮಾತನಾಡಿರುವುದು ತಪ್ಪು ಎಂದು ಅವರು ಹೇಳಿದ್ದಾರೆ.
ಕೈಮುಗಿದು ಕಣ್ಣೀರು ಹಾಕಿ ನಟ ವಿಜಯ ರಂಗರಾಜು ಕ್ಷಮೆಯಾಚಿಸಿದ್ದಾರೆ.
ಮಾತನಾಡುವ ಭರದಲ್ಲಿ ಏನೇನೋ ಹೇಳಿಕೆ ನೀಡಿದ್ದೇನೆ. ದಯಮಾಡಿ ಕ್ಷಮಿಸಿ ಎಂದು ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
PublicNext
13/12/2020 01:58 pm