ಭಾರತದ ಪವಿತ್ರ ಪುಣ್ಯಕ್ಷೇತ್ರ ಕಾಶಿ. ಇದನ್ನು ಬನಾರಸ್ ಅಂತಲೂ ಕರೆಯುತ್ತಾರೆ. ಈಗ 'ಬನಾರಸ್' ಹೆಸರಿನ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ.
ಇತ್ತೀಚೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಾಂಕೇತಿಕವಾಗಿ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳ ನಿರ್ದೇಶನಕ್ಕೆ ಹೆಸರಾಗಿರುವ ಜಯತೀರ್ಥ 'ಬನಾರಸ್' ಚಿತ್ರವನ್ನು ನಿರ್ದೇಶನ ಮಾಡಿದ್ದು, ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ಈ ಚಿತ್ರದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ.
ಸೋನಾಲ್ ಮಾಂಟೆರೊ ಈ ಚಿತ್ರದ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ. ದೇವರಾಜ್, ಅಚ್ಯುತ್‌ಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಮುಂತಾದವರು ಬನಾರಸ್ ಸಿನಿಮಾ ಬಳಗದಲ್ಲಿದ್ದಾರೆ. ಚಿತ್ರದ ಸುಮಧುರ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಹರ್ಷ ನೃತ್ಯ ನಿರ್ದೇಶನ ಹಾಗೂ ವಿಜಯ್ ಮಾಸ್ಟರ್, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.
ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಈ ಚಿತ್ರಕ್ಕೆ ಮುಜಮ್ಲಿಲ್ ಅಹಮದ್ ಖಾನ್ ಅವರ ಸಹ ನಿರ್ಮಾಣವಿದೆ. ವಿಭಿನ್ನ ಪ್ರೇಮಕಥೆ ಹೊಂದಿರುವ ಈ ಚಿತ್ರದ ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ನಡೆದಿದ್ದು ಕಾಶಿಗೂ ಚಿತ್ರದ ಕಥೆಗೂ ಸಂಬಂಧವಿದೆ ಅಂತೆ. ಹಾಗಾಗಿ ಅಲ್ಲೇ ಸಿನಿಮಾ ಹೆಚ್ಚಿನ ಚಿತ್ರೀಕರಣವಾಗಿದೆ.
ಇಲ್ಲಿಯವರೆಗೆ ಯಾವ ಕನ್ನಡ ಚಿತ್ರಗಳ ಚಿತ್ರೀಕರಣ ಸಹ ಕಾಶಿಯಲ್ಲಿ ಇಷ್ಟು ದಿನ ನಡೆದಿಲ್ಲ. ಬಹುಶಃ ಇದೇ ಮೊದಲು. ಕಾಶಿಯ ಪರಂಪರೆ, ಸಂಸ್ಕೃತಿ ಹಾಗೂ ಅಲ್ಲಿನ ಪಾತ್ರಗಳನ್ನು ಬನಾರಸ್ ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು ಎಂದು ನಿರ್ದೇಶಕ ಜಯತೀರ್ಥ ಪ್ರೇಕ್ಷಕರ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
PublicNext
12/12/2020 06:17 pm