ಶಿಡ್ಲಘಟ್ಟ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲಿಲ್ಲ ಎಂಬಂತೆ ಸರ್ಕಾರ ರಸ್ತೆ ಅಭಿವೃದ್ಧಿಗೆ 60 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ರೂ ಸಹ ಕಾಮಗಾರಿಯನ್ನು ಆರಂಭಿಸಲು ಗುತ್ತಿಗೆದಾರ ನಿರ್ಲಕ್ಷ್ಯ ವಹಿಸಿರೋದು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಗರದಲ್ಲಿ ಕಂಡುಬಂದಿದೆ.
ಶಿಡ್ಲಘಟ್ಟ ನಗರದಲ್ಲಿ ರಸ್ತೆಯ ಸ್ಥಿತಿ ಶೋಚನೀಯವಾಗಿದ್ದು, ವಾಹನ ಸಂಚಾರ ಬಿಡಿ, ಜನರು ಸಹ ಸಂಚರಿಸಲು ಯೋಗ್ಯ ಇಲ್ಲದಂತಾಗಿದೆ. ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಬಹುತೇಕ ರಸ್ತೆಯಲ್ಲಿ ಹೊಂಡಗಳು ತುಂಬಿಕೊಂಡು ವಾಹನ ಸವಾರರು ಗುಂಡಿಗಳು ಮತ್ತು ಹೊಂಡಗಳನ್ನು ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದ್ದಾರೆ.
ಈ ಕ್ಷೇತ್ರದ ಶಾಸಕ, ಅಧಿಕಾರಿಗಳು ನಗರಸಭಾ ಸದಸ್ಯರು ಸೇರಿದಂತೆ ಇದೇ ಮಾರ್ಗವನ್ನು ಅನುಸರಿಸಿ ಸಂಚಾರ ಮಾಡುತ್ತಾರೆ. ಆದರೆ ಇಲ್ಲಿಯವರೆಗೂ ಅವರ ಗಮನಕ್ಕೆ ಬಂದರೂ ಬಾರದಂತೆ ನಿರ್ಲಕ್ಷ್ಯತನ ತೋರಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಎಸ್.ರಹಮತ್ತುಲ್ಲಾ, ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿ ನಾಲ್ಕು ತಿಂಗಳಾದರೂ ಸಹ ಕಾಮಗಾರಿಯನ್ನು ಆರಂಭಿಸದೇ ಗುತ್ತಿಗೆದಾರ ನಿರ್ಲಕ್ಷ್ಯ ವಹಿಸಿದ್ದಾರೆ. ಜೊತೆಗೆ ಅಧಿಕಾರಿಗಳು ಕಾಮಗಾರಿಯನ್ನು ಆರಂಭಿಸಲು ಆಸಕ್ತಿ ವಹಿಸಿಲ್ಲ. ಶೀಘ್ರವೇ ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
PublicNext
20/09/2022 02:42 pm