ಚಿಕ್ಕಬಳ್ಳಾಪುರ:ಗೌರಿಬಿದನೂರು ತಹಸೀಲ್ದಾರ್ ಕಚೇರಿಗೆ ನೆನ್ನೆ ಜಿಲ್ಲಾಧಿಕಾರಿ ಎನ್.ಎಮ್ ನಾಗರಾಜ್ ಅವರು ಭೇಟಿ ನೀಡಿ ತಾಲ್ಲೂಕು ಆಡಳಿತದ ಕಚೇರಿಯ ಸಮಸ್ಯೆಗಳು, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.
ರಾಜ್ಯ ಸರ್ಕಾರದ ಆದೇಶದನ್ವಯ ಪ್ರತಿ ಮಂಗಳವಾರ ಜಿಲ್ಲೆಯ ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿಪರಿಶೀಲಿಸಬೇಕಾಗಿರುತ್ತದೆ.ಈ ಹಿನ್ನೆಲೆಯಲ್ಲಿ ಗೌರಿಬಿದನೂರು ತಹಸೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಂತರ ಆಧಾರ್ ನೋಂದಣಿ, ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ, ಮೂಲಸೌಕರ್ಯಗಳ ಕುರಿತು ಮಾಹಿತಿ ಪಡೆದರು. ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ನೀಡಿದರು.
ತಾಲೂಕು ಕಚೇರಿ ಭೇಟಿಯ ನಂತರ ತೋಂಡೆಬಾವಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಮೂಲಭೂತ ಸೌಕರ್ಯಗಳು,ಆರೋಗ್ಯ ಸೇವೆಯ ಪ್ರಕ್ರಿಯೆ, ಅಲ್ಲಿನ ಸ್ವಚ್ಚತೆ ಹಾಗೂ ನಿರ್ವಹಣೆಯ, ಸ್ಥಿತಿ ಗತಿಗಳ ಬಗ್ಗೆ ಪರಿಶೀಲಿಸಿದರು. ಬಳಿಕ ಅಲಕಾಪುರ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
PublicNext
21/09/2022 11:22 am