ಚಿಕ್ಕಬಳ್ಳಾಪುರ : ಸಂತರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಯುವ ಪೀಳಿಗೆಗೆ ಪರಿಚಯಸಲು ಮುಂದಾಗಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ರವರು ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ,ತಾಲೂಕು ಆಡಳಿತ,ಬೋವಿ ಸಮುದಾಯದ ವತಿಯಿಂದ 853 ನೇ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು. ಅವರು ಅಸಮಾನತೆ,ವರ್ಣ,ಜಾತಿ,ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು.ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಅವರು ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.
12ನೇ ಶತಮಾನದಲ್ಲಿದ್ದ ಬಹಳಷ್ಟು ಪಿಡುಗುಗಳು, ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಚನ ಚಳುವಳಿಕಾರರಲ್ಲಿ ಸಿದ್ದರಾಮೇಶ್ವರರು ಕೂಡ ಪ್ರಮುಖರು. ಇಂತಹ ಮಹಾನ್ ಶಿವಯೋಗಿಗಳ ಜಯಂತಿಯನ್ನು ಒಂದು ಜಾತಿಗೆ ಸೀಮಿತ ಮಾಡದೇ ಇಡೀ ಸಮಾಜಕ್ಕೆ ಅವರ ಕೊಡುಗೆ ಮಾದರಿಯಾಗಬೇಕು ಎಂದು ವಿವರಿಸಿದರು.
ಈ ವೇಳೆ ಬೋವಿ ಸಮುದಾಯದ ಮುಖಂಡರು ಹಾಗೂ ಸಚಿವರು ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಪುಷ್ಪ ನಮನ ಸಲ್ಲಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ವಿವಿಧ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬೋವಿ ಸಮುದಾಯದ ಮುಖಂಡರುಗಳಿಗೆ ಹಿರಿಯರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
Kshetra Samachara
15/01/2025 03:33 pm