ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಇನ್ಮುಂದೆ ಕಬ್ಬನ್ ಪಾರ್ಕ್‌ನಲ್ಲಿ ನಾಯಿಗಳಿಗೆ ಎಂಟ್ರಿ ಇಲ್ಲ'

ಬೆಂಗಳೂರು: ಕಬ್ಬನ್ ಪಾರ್ಕ್ ಒಳಗೆ ಇನ್ನು ಮುಂದೆ ಸಾಕು ನಾಯಿ ಆಗಲಿ, ಬೀದ ನಾಯಿ ಆಗಲೀ ಪ್ರವೇಶ ಮಾಡುವಂತಿಲ್ಲ. ಕಬ್ಬನ್ ಉದ್ಯಾನವನದಲ್ಲಿ ಇನ್ಮುಂದೆ ನಾಯಿಗಳು ಕಾಣಿಸಿಕೊಂಡರೆ ಬಿಬಿಎಂಪಿ ಅಧಿಕಾರಿಗಳ ತಲೆದಂಡ ಖಚಿತ. ಇಂತಹ ಮಹತ್ವದ ಆದೇಶವನ್ನು ಹೈಕೋರ್ಟ್ ನೀಡಿದೆ.

'ನಾಯಿಗಳನ್ನು ಸಾರ್ವಜನಿಕ ಸ್ಥಳಗಳಿಗೆ ಕರೆತಂದು ಮಲ, ಮೂತ್ರ ವಿಸರ್ಜನೆ ಮಾಡಿಸುವುದನ್ನು ತಡೆಯಬೇಕು. ಈ ವಿಷಯದಲ್ಲಿ ಬಿಬಿಎಂಪಿ ತಾನಾಗಿಯೇ ಕ್ರಮ ಜರುಗಿಸಬೇಕು. ಇಲ್ಲವಾದರೆ ನ್ಯಾಯಾಲಯವೇ ಈ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಂಡು ನೋಟಿಸ್ ಜಾರಿ ಮಾಡಲು ಆದೇಶಿಸಬೇಕಾಗುತ್ತದೆ' ಎಂದು ಹೈಕೋರ್ಟ್‌ ಮೌಖಿಕ ಎಚ್ಚರಿಕೆ ನೀಡಿದೆ.

ಕಬ್ಬನ್ ಪಾರ್ಕ್ ಒಳಗೆ ನಾಯಿಗಳನ್ನು ಬಿಡುತ್ತಿರುವುದರಿಂದ ಜನರು ಪಾರ್ಕಿನಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಬೀದಿ ನಾಯಿಗಳು ಪ್ರವೇಶ ಮಾಡುತ್ತಿವೆ. ಬೀದಿ ನಾಯಿಗಳಿಗೆ ಕೆಲವರು ಊಟ ತಂದು ಹಾಕುತ್ತಾರೆ. ಊಟ ಇಲ್ಲದ ವೇಳೆ ನಾಯಿಗಳು ಆಕ್ರೋಶಗೊಂಡು ದಾಳಿ ಮಾಡುತ್ತವೆ. ಇದು ಅಪಾಯಕಾರಿ. ಇನ್ನು ಸಾಕು ನಾಯಿಗಳನ್ನು ಮಾಲೀಕರು ತಂದು ಪಾರ್ಕ್ ಒಳ ಭಾಗದಲ್ಲಿ ಮಲ- ಮೂತ್ರ ವಿಸರ್ಜನೆ ಮಾಡಿಸುತ್ತಾರೆ. ಇದರಿಂದ ಜನರಿಗೆ ಪಾರ್ಕಿನಲ್ಲಿ ಓಡಾಡಲು ಕಷ್ಟವಾಗುತ್ತದೆ. ಪಾರ್ಕ್ ಒಳಗೆ ನಾಯಿಗಳು ಬಾರದಂತೆ ಬಿಬಿಎಂಪಿ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಹೈಕೋರ್ಟ್ ಆದೇಶದ ಬೆನ್ನಲ್ಲೇ ಕಬ್ಬನ್ ಪಾರ್ಕ್ ಒಳಗೆ ಸಾಕು ನಾಯಿಗಳ ಪ್ರವೇಶ ನಿಷೇಧಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ. ಇದರ ಜತೆಗೆ ಬೀದಿ ನಾಯಿಗಳು ಪಾರ್ಕ್ ಒಳಗೆ ಪ್ರವೇಶಿಸದಂತೆ ಕ್ರಮ ಜರುಗಿಸಲು ತಲೆ ಕೆಡಿಸಿಕೊಳ್ಳುತ್ತಿದೆ. ಕಬ್ಬನ್ ಉದ್ಯಾನವನಕ್ಕೆ ಐದಕ್ಕೂ ಹೆಚ್ಚು ಕಡೆ ಪ್ರವೇಶ ದ್ವಾರಗಳಿವೆ. ಕಾರ್ಪೋರೇಷನ್ ವೃತ್ತ, ಕೆ.ಆರ್. ಸರ್ಕಲ್ ವೃತ್ತ, ಹೈಕೋರ್ಟ್ ಮುಖ್ಯ ದ್ವಾರ, ಪ್ರೆಸ್ ಕ್ಲಬ್ ದ್ವಾರ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ದ್ವಾರ, ವೆಂಕಟಪ್ಪ ಆರ್ಟ್ ಗ್ಯಾಲರಿ ಸೇರಿದಂತೆ ಸಾಕಷ್ಟು ದಾರಿಗಳಿವೆ. ನಗರದ ಹೃದಯ ಭಾಗದಲ್ಲಿರುವ ಈ ಪ್ರದೇಶದಲ್ಲಿ ಬಿದಿರು - ಮರಗಳಿರುವ ಕಾರಣ ಬೀದಿ ನಾಯಿಗಳ ದಂಡು ಕೂಡ ನೆಲೆಯೂರಿದೆ. ಇದೀಗ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಬಿಬಿಎಂಪಿ ಹೊರ ಸಾಗಿಸುತ್ತದೆಯೋ ಅಥವಾ ಬೀದಿ ನಾಯಿಗಳು ಎಂಟ್ರಿ ಕೊಡದಂತೆ ಬೇಲಿ ಹಾಕುತ್ತೋ ಕಾದು ನೋಡಬೇಕಿದೆ.

Edited By : Vijay Kumar
Kshetra Samachara

Kshetra Samachara

09/12/2021 10:51 pm

Cinque Terre

270

Cinque Terre

0

ಸಂಬಂಧಿತ ಸುದ್ದಿ