ಬಾಗಲಕೋಟೆ: ಕಾರ್ಮಿಕರ ವೇತನ ಪರಿಷ್ಕರಣೆ, ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ಮಜ್ದೂರ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಮಜ್ದೂರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಹಳ್ಳದ ನೇತೃತ್ವದಲ್ಲಿ ಸಾರಿಗೆ ನೌಕರರು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಭೇಟಿ ಮಾಡಿ ಮನವಿ ಸಲ್ಲಿಸಿದರು. ಎರಡು ಹಂತದ ಆಡಳಿತ ವ್ಯವಸ್ಥೆ ಜಾರಿ ಮಾಡಬೇಕು, ಏಕರೂಪ ಶಿಸ್ತು ಸಂಹಿತೆ, ಸಿ ಮತ್ರು ಡಿ ತಿದ್ದುಪಡಿ ಮಾಡಬೇಕು, ನಿವೃತ್ತಿ, ನಿಧನ ಮತ್ತು ಸ್ವಯಂ ನಿವೃತ್ತಿ ಕಾರ್ಮಿಕರ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಮುಷ್ಕರದ ಅವಧಿಯಲ್ಲಿ 2021 ಎಪ್ರಿಲ್ .6 ರಂದು ಇದ್ದಂತೆ ಎಲ್ಲ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕು. ಈ ಎಲ್ಲ ಬೇಡಿಕೆಗಳನ್ನು ಕೂಡಲೇ ಮುಖ್ಯಮಂತ್ರಿಗಳು ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಮೇಲಿನ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದರೆ ಬರುವ ಅ.19 ರಂದು ಮುಖ್ಯಮಂತ್ರಿಗಳ ನಿವಾಸದ ಎದುರು ಬೃಹತ್ ಪ್ರತಿಭಟನೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಯು.ವೈ.ಯರನಾಳ, ಉಪಾಧ್ಯಕ್ಷ ಆರ್.ಟಿ.ವಜ್ರಮಟ್ಟಿ, ಕಾರ್ಯದರ್ಶಿ ಎಂ.ಎಂ.ಹರಿಜನ, ಸಾರಿಗೆ ನೌಕರರಾದ ಜೆ.ಪಿ.ಪೊಲೀಸ್ ಪಾಟೀಲ ಹಾಜರಿದ್ದರು.
Kshetra Samachara
10/10/2022 08:01 pm