ಕಾಶಿಯ ನೆನಪು ಇನ್ನೂ ಹಸಿರು ‘2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಶಿಯಲ್ಲಿ ಪ್ರಚಾರ ಮಾಡಿದ ನಂತರ ನಾನು ಅಹಮದಾಬಾದ್ಗೆ ಹೋಗಿದ್ದೆ. ನಾನು ಅವರಿಗೆ ಸ್ವಲ್ಪ ಪ್ರಸಾದ ತೆಗೆದುಕೊಂಡು ಹೋಗಿದ್ದೆ. ಅಮ್ಮನನ್ನು ಭೇಟಿಯಾದಾಗ, ಕಾಶಿ ವಿಶ್ವನಾಥ ಮಹಾದೇವನಿಗೆ ಪೂಜೆ ಸಲ್ಲಿಸಿದೆಯಾ ಎಂದು ಕೇಳಿದರು. ತಾಯಿ ಇನ್ನೂ ‘ಕಾಶಿ ವಿಶ್ವನಾಥ ಮಹಾದೇವ’ ಎಂದು ಪೂರ್ಣ ಹೆಸರನ್ನು ಬಳಸುತ್ತಾರೆ. ನಂತರ ಮಾತುಕತೆಯ ಸಮಯದಲ್ಲಿ, ಯಾರದೋ ಮನೆಯ ಆವರಣದಲ್ಲಿ ದೇವಸ್ಥಾನವಿದೆ ಎಂಬಂತೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಹೋಗುವ ಮಾರ್ಗಗಳು ಇನ್ನೂ ಹಾಗೆಯೇ ಇವೆಯೇ ಎಂದು ಕೇಳಿದರು. ನನಗೆ ಆಶ್ಚರ್ಯವಾಯಿತು. ‘ನೀನು ದೇವಸ್ಥಾನಕ್ಕೆ ಯಾವಾಗ ಭೇಟಿ ನೀಡಿದ್ದು’ ಎಂದು ಕೇಳಿದೆ. ಬಹಳ ವರ್ಷಗಳ ಹಿಂದೆ ಕಾಶಿಗೆ ಹೋಗಿದ್ದೆ, ಆದರೆ ಎಲ್ಲವೂ ನೆನಪಿದೆ ಎಂದು ಅವರು ಉತ್ತರಿಸಿದರು.’
ನನ್ನ ಜೀವನದಲ್ಲಿ ನಡೆದ ಒಳ್ಳೆಯದಕ್ಕೆ ಮತ್ತು ನನ್ನಲ್ಲಿರುವ ಒಳ್ಳೆಯತನಕ್ಕೆ ಹೆತ್ತವರೇ ಕಾರಣ. ದೆಹಲಿಯಲ್ಲಿ ಕುಳಿತಿರುವ ನನಗೆ ಹಿಂದಿನ ನೆನಪುಗಳು ತುಂಬಿ ಬರುತ್ತವೆ. ನನ್ನ ತಾಯಿ ಎಷ್ಟು ಅಸಾಧಾರಣಳೋ ಅಷ್ಟೇ ಸರಳ, ಎಲ್ಲಾ ತಾಯಂದಿರಂತೆ!. ನಾನು ನನ್ನ ತಾಯಿಯ ಬಗ್ಗೆ ಬರೆಯುವಾಗ, ನಿಮ್ಮಲ್ಲಿ ಅನೇಕರಿಗೆ ನಿಮ್ಮ ತಾಯಂದಿರ ಬಗ್ಗೆ ಸಾದೃಶ್ಯ ಕಂಡುಬರುತ್ತದೆ. ಇದನ್ನು ಓದುವಾಗ, ನೀವು ನಿಮ್ಮ ಸ್ವಂತ ತಾಯಿಯ ಚಿತ್ರವನ್ನೇ ನೋಡಬಹುದು.
ನನ್ನ ತಾಯಿಯು ಎಳೆವಯಸ್ಸಿನಲ್ಲಿಯೇ ಸ್ಪಾ್ಯನಿಷ್ ಫ್ಲೂ ಸಾಂಕ್ರಾಮಿಕ ರೋಗದಿಂದಾಗಿ ಅಮ್ಮನನ್ನು ಕಳೆದುಕೊಂಡರು. ಆಕೆಗೆ ಅಮ್ಮನ ಮುಖವಾಗಲಿ, ಅವಳ ಮಡಿಲಿನ ನೆಮ್ಮದಿಯಾಗಲಿ ನೆನಪಿಲ್ಲ. ಶಾಲೆಗೆ ಹೋಗಿ ಓದು ಬರಹ ಕಲಿಯಲೂ ಆಗಲಿಲ್ಲ. ಆಕೆಯ ಬಾಲ್ಯವು ಬಡತನ ಮತ್ತು ಕಷ್ಟದಿಂದ ಕೂಡಿತ್ತು. ವಡ್ ನಗರದಲ್ಲಿ ಕುಟುಂಬವು ಶೌಚಗೃಹ ಅಥವಾ ಸ್ನಾನದ ಮನೆಯಂತಹ ಐಷಾರಾಮಗಳಿರಲಿ, ಕಿಟಕಿಯೂ ಇಲ್ಲದ ಪುಟ್ಟ ಮನೆಯಲ್ಲಿ ವಾಸಿಸುತ್ತಿತ್ತು. ಮಣ್ಣಿನ ಗೋಡೆಗಳು ಮತ್ತು ಹೆಂಚುಗಳ ಛಾವಣಿಯಿದ್ದ ಒಂದು ಕೋಣೆಯನ್ನೇ ನಾವು ಮನೆ ಎಂದು ಕರೆಯುತ್ತಿದ್ದೆವು. ಹೆತ್ತವರು, ನನ್ನ ಒಡಹುಟ್ಟಿದವರು ಮತ್ತು ನಾನು ಅದರಲ್ಲಿಯೇ ಇದ್ದೆವು. ಮನೆಯ ಖರ್ಚನ್ನು ನಿಭಾಯಿಸಲು ತಾಯಿ ಕೆಲವು ಮನೆಗಳಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದರು. ನಮ್ಮ ಅಲ್ಪ ಆದಾಯಕ್ಕೆ ಪೂರಕವಾಗಿ ಚರಖಾದಲ್ಲಿ ನೂಲುತ್ತಿದ್ದರು. ಹತ್ತಿ ಬಿಡಿಸುವುದರಿಂದ ಹಿಡಿದು ನೂಲುವವರೆಗೆ ಎಲ್ಲವನ್ನೂ ಮಾಡುತ್ತಿದ್ದರು.
ಇಂತಹ ಕಷ್ಟದ ಕೆಲಸದ ನಡುವೆಯೂ ಹತ್ತಿಗಿಡದ ಮುಳ್ಳು ನಮಗೆ ಚುಚ್ಚದಂತೆ ಕಾಳಜಿ ವಹಿಸುತ್ತಿದ್ದರು. ಯಾವುದೇ ಸರ್ಕಾರಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ತಾಯಿ ನನ್ನೊಂದಿಗೆ ಎಂದಿಗೂ ಬರುವುದಿಲ್ಲ. ಎರಡು ಬಾರಿ ಮಾತ್ರ ನನ್ನ ಜೊತೆಗಿದ್ದರು. ಮೊದಲನೆಯ ಬಾರಿಗೆ, ಏಕತಾ ಯಾತ್ರೆಯನ್ನು ಮುಗಿಸಿ ಲಾಲ್ಚೌಕ್ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿ ಶ್ರೀನಗರದಿಂದ ಹಿಂದಿರುಗಿದ ನಂತರ ಅಹಮದಾಬಾದ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ನನ್ನ ಹಣೆಗೆ ತಿಲಕವಿಟ್ಟಿದ್ದರು. ತಾಯಿಗೆ ಅದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು. ಏಕೆಂದರೆ ಏಕತಾ ಯಾತ್ರೆಯ ಸಮಯದಲ್ಲಿ ಫಗ್ವಾರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೆಲವು ಜನರು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ತಾಯಿ ತುಂಬಾ ಚಿಂತಿತರಾಗಿದ್ದರು. ಎರಡನೆಯ ನಿದರ್ಶನವೆಂದರೆ, 2001ರಲ್ಲಿ ಗುಜರಾತಿನ ಮುಖ್ಯಮಂತ್ರಿಯಾಗಿ ನಾನು ಪ್ರಮಾಣವಚನ ಸ್ವೀಕರಿಸಿದಾಗ. ಅದು ತಾಯಿ ನನ್ನೊಂದಿಗೆ ಭಾಗವಹಿಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮ. ತಾಯಿ ಇತರರ ಸಂತೋಷದಲ್ಲಿ ತನ್ನ ಸಂತೋಷ ಕಂಡುಕೊಳ್ಳುತ್ತಾರೆ. ನಮ್ಮ ಮನೆ ಚಿಕ್ಕದಾಗಿರಬಹುದು, ಆದರೆ ಅವರು ತುಂಬಾ ವಿಶಾಲ ಹೃದಯದವರು. ತಂದೆಯ ಆಪ್ತ ಸ್ನೇಹಿತರೊಬ್ಬರು ಹತ್ತಿರದ ಹಳ್ಳಿಯಲ್ಲಿದ್ದರು. ಅವರ ಅಕಾಲಿಕ ಮರಣದ ನಂತರ, ತಂದೆ ತನ್ನ ಸ್ನೇಹಿತನ ಮಗ ಅಬ್ಬಾಸ್ನನ್ನು ಮನೆಗೆ ಕರೆತಂದರು. ಅವನು ನಮ್ಮಲ್ಲಿಯೇ ಇದ್ದು ಓದು ಮುಗಿಸಿದ. ತಾಯಿಯು ನಮ್ಮೆಲ್ಲರಂತೆಯೇ ಅಬ್ಬಾಸ್ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿದ್ದರು. ಪ್ರತಿ ವರ್ಷ ಈದ್ನಂದು ಅವನ ನೆಚ್ಚಿನ ಖಾದ್ಯಗಳನ್ನು ತಯಾರಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ನೆರೆಹೊರೆಯ ಮಕ್ಕಳು ಬಂದು ಅಮ್ಮನ ವಿಶೇಷ ಅಡುಗೆ ಸವಿಯುವುದು ಮಾಮೂಲಿಯಾಗಿತ್ತು.
ತಾಯಿ ತನ್ನ ಕರ್ತವ್ಯಗಳ ಬಗ್ಗೆ ಜಾಗೃತರಾಗಿರುತ್ತಾರೆ. ಚುನಾವಣೆಗಳು ಪ್ರಾರಂಭವಾದಾಗಿನಿಂದ, ಅವರು ಪಂಚಾ ಯತ್ನಿಂದ ಸಂಸತ್ತಿನವರೆಗೆ ಪ್ರತಿ ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ. ಕೆಲ ದಿನಗಳ ಹಿಂದೆ ಗಾಂಧಿನಗರ ಮುನ್ಸಿಪಲ್ ಕಾರ್ಪೆರೇಷನ್ ಚುನಾವಣೆಯಲ್ಲಿ ಮತ ಚಲಾಯಿಸಿದರು. ದೆಹಲಿಗೆ ತೆರಳಿದ ನಂತರ, ಅವರೊಂದಿಗಿನ ನನ್ನ ಭೇಟಿಗಳು ಮೊದಲಿಗಿಂತ ಕಡಿಮೆಯಾಗಿವೆ. ಕೆಲವೊಮ್ಮೆ ಗಾಂಧಿನಗರಕ್ಕೆ ಭೇಟಿ ನೀಡಿದಾಗ, ಸ್ವಲ್ಪ ಕಾಲ ತಾಯಿಯನ್ನು ಭೇಟಿ ಮಾಡುತ್ತೇನೆ. ಆದಾಗ್ಯೂ, ನನ್ನ ಅನುಪಸ್ಥಿತಿಯ ಬಗ್ಗೆ ತಾಯಿಯಿಂದ ಯಾವುದೇ ಅಸಮಾಧಾನವನ್ನು ಕೇಳಿಲ್ಲ. ಅವರ ಪ್ರೀತಿ ಮತ್ತು ವಾತ್ಸಲ್ಯ ಹಾಗೆಯೇ ಇದೆ; ಅವರ ಆಶೀರ್ವಾದ ಹಾಗೆಯೇ ಇರುತ್ತದೆ. ನೀವು ದೆಹಲಿಯಲ್ಲಿ ಸಂತೋಷವಾಗಿದ್ದೀರಾ? ನಿಮಗೆ ಇಷ್ಟವಾ? ಎಂದು ತಾಯಿ ಆಗಾಗ ನನ್ನನ್ನು ಕೇಳುತ್ತಾರೆ. ತಾಯಿ ಪ್ರಪಂಚದ ಬೆಳವಣಿಗೆಗಳ ಬಗ್ಗೆ ತಿಳಿದಿರುತ್ತಾರೆ. ಇತ್ತೀಚಿಗೆ ಅವರನ್ನು ದಿನ ಎಷ್ಟು ಹೊತ್ತು ಟಿವಿ ನೋಡುತ್ತೀಯಾ ಎಂದು ಕೇಳಿದೆ. ಟಿವಿಯಲ್ಲಿ ಹೆಚ್ಚಿನವರು ಪರಸ್ಪರ ಜಗಳವಾಡುತ್ತಿರುತ್ತಾರೆ, ಶಾಂತವಾಗಿ ಸುದ್ದಿಗಳನ್ನು ಓದುವ ಮತ್ತು ಎಲ್ಲವನ್ನೂ ವಿವರಿಸುವವರನ್ನು ಮಾತ್ರ ನೋಡುತ್ತೇನೆ ಎಂದು ಉತ್ತರಿಸಿದರು!
PublicNext
19/06/2022 08:13 am