ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದ ಜನರನ್ನು ಜೀವ ಭಯಕ್ಕೆ ದೂಡಿರುವ ಕಾಡಾನೆ ಹಾವಳಿ ಇದೀಗ ಬಯಲು ಸೀಮೆ ಭಾಗದ ಜನರಿಗೂ ಪ್ರಾಣ ಕಂಟಕ ತಂದೊಡ್ಡುತ್ತಿವೆ. ಕಾಡು ಹಂದಿ ಕಾಟದಿಂದ ತಾನು ಮಾಡಿದ್ದ ಬೆಳೆ ರಕ್ಷಣೆಗೆ ಅಂತ ತಾತ್ಕಾಲಿಕ ಗುಡಿಸಲು ನಿರ್ಮಿಸಿ ರಾತ್ರಿ ಕಾವಲು ಕಾಯುತ್ತಿದ್ದ ರೈತ ಈರಪ್ಪ ಮೇಲೆ ರಾತ್ರೋರಾತ್ರಿ ದಾಳಿ ಮಾಡಿರುವ ಒಂಟಿ ಸಲಗ ಅಮಾಯಕ ರೈತನನ್ನು ಬಲಿ ಪಡೆದಿದೆ. ಒಂದೇ ತಿಂಗಳ ಅಂತರದಲ್ಲಿ ಇಬ್ಬರು ಬಲಿಯಾಗಿದ್ದು, ಮೂರು ಕಾಡಾನೆ ಸೆರೆ ಹಿಡಿಯಲಾಗಿದೆ. ಪದೇ ಪದೆ ಜನರನ್ನ ಬಲಿ ಪಡೆಯುತ್ತಿರುವ ಕಾಡಾನೆ ಹಾವಳಿಯಿಂದ ಶಾಶ್ವತ ಮುಕ್ತಿ ಕೊಡಿಸಿ ಎಂದು ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದು ಮನೆಯ ಯಜಮಾನನ ಕಳೆದುಕೊಂಡ ಸಂಬಂಧಿಕರ ರೋಧನೆ ಮುಗಿಲು ಮುಟ್ಟಿತ್ತು.
ಇದುವರೆಗೆ ಮಲೆನಾಡಿಗೆ ಸೀಮಿತವಾಗಿದ್ದ ಗಜ ಗಲಾಟೆ ಬಯಲು ಸೀಮೆಗೂ ವ್ಯಾಪಿಸಿದ್ದು, ಎಲ್ಲೆಂದರಲ್ಲಿ ಪ್ರತ್ಯಕ್ಷವಾಗ್ತಿರುವ ಆನೆ ಹಿಂಡು ಬೆಳೆ ಹಾನಿ ಜೊತೆಗೆ ಜನರ ಜೀವ ಬಲಿ ಪಡೆಯುತ್ತಿವೆ. ತಿಂಗಳ ಹಿಂದೆ ಮಲೆನಾಡಿನ ಮೂಡಿಗೆರೆಯಲ್ಲಿ ಮಹಿಳೆ ಬಲಿಪಡೆದಿದ್ದ ಒಂಟಿ ಸಲಗ ಇಂದು ಬಯಲು ಸೀಮೆಯಲ್ಲಿ ರೈತನನ್ನು ಬಲಿ ಪಡೆದಿದೆ. ತರಿಕೆರೆ ತಾಲ್ಲೂಕಿನ ಹಾದಿಗೆರೆ ಸಮೀಪದ ರಾಗಿಬಸವನಹಳ್ಳಿಯಲ್ಲಿ ಬೆಳೆ ರಕ್ಷಣೆಗಾಗಿ ರಾತ್ರಿ ಜಮೀನಿನ ಬಳಿ ತಂಗಿದ್ದ ರೈತ ಈರಪ್ಪ (68) ಮೇಲೆ ದಾಳಿ ಮಾಡಿರುವ ಒಂಟಿ ಸಲಗ ಗುಡಿಸಲು ಸಮೇತ ದ್ವಂಸ ಮಾಡಿ ರೈತನನ್ನು ಕೊಂದು ಹಾಕಿದೆ. ಮನೆಯಲ್ಲಿ ದುಡಿಯೋ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರು ರೋಧನೆ ಮುಗಿಲು ಮುಟ್ಟಿದ್ದು, ಪ್ರತಿ ಬಾರಿ ಆನೆ ದಾಳಿಗೆ ಜನರು ಬಲಿಯಾದಾಗ ಆನೆ ಹಾವಳಿಗೆ ಪರಿಹಾರ ನೀಡುವ ಮಾತನಾಡುವ ಸರ್ಕಾರ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದು ಇನ್ನಾದರೂ ಸಮಸ್ಯೆ ಅಂತ್ಯವಾಗಲಿ. ಅಮಾಯಕ ಜನರ ಬಲಿ ನಿಲ್ಲಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಬೈಟ್ : ವಿಶ್ವನಾಥ್, ಸ್ಥಳೀಯ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ ಒಂದೇ ವರ್ಷದಲ್ಲಿ ಐವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಬೇರೆ ಬೇರೆ ಕಾರಣಗಳಿಂದ ನಾಲ್ಕು ಕಾಡಾನೆಗಳು ಬಲಿಯಾಗಿದ್ದು ನಾಲ್ಕು ಆನೆಗಳನ್ನು ಸೆರೆ ಹಿಡಿಯಲಾಗಿದೆ. ದಿನೇ ದಿನೇ ಕಾಡಿನಿಂದ ನಾಡಿಗೆ ಬರುವ ಆನೆಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕೆಂಬ ಜನರ ಕೂಗು ಅರಣ್ಯ ರೋಧನವಾಗಿದೆ. ಸರ್ಕಾರ ಇತ್ತೀಚೆಗೆ ಆನೆ ಟಾಸ್ಕ್ ಫೋರ್ಸ್ ರಚಿಸಿ ಕಾಡಾನೆ ಮಾನವ ಸಂಘರ್ಷ ತಡೆದು ಪ್ರಾಣ ಹಾನಿ ತಡೆಯೋ ಮಾತನಾಡುವ ವೇಳೆಯೇ ಇಬ್ಬರ ಬಲಿ ನಡೆದು ಹೋಗಿದೆ. ಇಷ್ಟಿದ್ದರೂ ಸರ್ಕಾರ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡುವ ಕ್ರಮಗಳ ಬಗ್ಗೆ ಕಠಿಣ ನಿಲುವು ತಳೆಯುತ್ತಿಲ್ಲ ಎನ್ನುವುದು ಜನರ ಆಕ್ರೋಶವಾಗಿದೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಆನೆಗಳಿಂದ ಇನ್ನೇಷ್ಟು ಬಲಿ ಬೇಕು ಎಂದು ಕಿಡಿಕಾರಿದರು. ನೊಂದವರಿಗೆ ಸಾಂತ್ವನ ಹೇಳಿದ ಅಧಿಕಾರಿಗಳು ಕೂಡಲೆ ಪರಿಹಾರದ ಭರವಸೆ ನೀಡಿದರು. ಮತ್ತೆ ಕಾಡಾನೆಗಳಿಂದ ಸಮಸ್ಯೆ ಆಗದಂತೆ ಕ್ರಮವಹಿಸುವ ಭರವಸೆ ನೀಡಿದ್ದಾರೆ.
PublicNext
26/12/2022 10:15 am