ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಯಾವುದೇ ಗೊಂದಲವಿಲ್ಲದೆ, ವಿರೋಧವಿಲ್ಲದೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ನಡುವೆ ಅಂಧಕಾಸುರನ ಸಂಹಾರ ಅದ್ದೂರಿಯಾಗಿ ನೆರವೇರಿದೆ. ಮೊನ್ನೆ ನಡೆದ ಶಾಂತಿ ಸಭೆಯಲ್ಲಿ ಆಚರಣೆಯನ್ನ ಮಾರ್ಪಡಿಸುವಂತೆ ಅಪಸ್ವರ ಕೇಳಿ ಬಂದ ಹಿನ್ನಲೆಯಲ್ಲಿ ತಾಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಯಾವುದೇ ಗೊಂದಲವಿಲ್ಲದಂತೆ ಅಂಧಕಾಸುರನ ಸಂಹಾರ ಕಾರ್ಯಕ್ರಮ ನೆರವೇರಿದೆ.
ಕಳೆದ ವರ್ಷ ಅಂದಕಾಸುರನ ಸಂಹಾರ ಕಾರ್ಯಕ್ರಮ ನಡೆಯುವ ವೇಳೆ ಮಹಿಷಾಸುರನ ಹೋಲಿಕೆಯಿರುವ ಚಿತ್ರ ಬಳಸಿದ ಬಗ್ಗೆ ದಲಿತ ಸಂಘಟನೆ ಹಾಗೂ ಪ್ರಗತಿಪರ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಲ್ಲದೆ ಕಾರ್ಯಕ್ರಮ ನಡೆಯುವ ವೇಳೆ ನೀರು ಎರಚಿದ ಪರಿಣಾಮ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಮಹಿಷಾಸುರನ ಚಿತ್ರ ಬಳಸಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಬಾರಿ ತಾಲ್ಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಿ ರಾಜ್ಯದ ಪ್ರಮುಖ ಆಗಮ ಪಂಡಿತರ ಜೊತೆ ಚರ್ಚಿಸಿ ಅಕ್ಷೇಪಾರ್ಹ ಚಿತ್ರಪಟವನ್ನ ಬದಲಾಯಿಸಿ ಶಿವಪುರಾಣದಲ್ಲಿ ವರ್ಣನೆ ಇರುವಂತೆ ನೂತನ ಚಿತ್ರಪಟವನ್ನ ಬಿಡಿಸಿ ಉಭಯತ್ರರ ಸಮ್ಮುಖದಲ್ಲಿ ತಾಲ್ಲೂಕು ಆಡಳಿತ ಬಿಡುಗಡೆಗೊಳಿಸಿತ್ತು. ಶ್ರೀಕಂಠೇಶ್ವರನ ದೇವಾಲಯದ ಮುಂದೆ ನೂತನವಾಗಿ ಬಿಡುಗಡೆ ಮಾಡಿದ ಅಂಧಕಾಸುರನ ಚಿತ್ರಪಟದ ಮಾದರಿಯ ಫ್ಲೆಕ್ಸ್ ಅಳವಡಿಸಿ ರಂಗೋಲಿಯಲ್ಲಿ ಚಿತ್ರಬಿಡಿಸಿ ಪ್ರತಿ ವರ್ಷ ನಡೆದುಬಂದಂತೆ ಸಾಂಪ್ರದಾಯಿಕವಾಗಿ ನಡೆಯಿತು. ಒಟ್ಟಾರೆ ಭಾರಿ ವಿವಾದಕ್ಕೆ ಕಾರಣವಾಗಿದ್ದ ಅಂಧಕಾಸುರನ ಸಂಹಾರ ಯಾವುದೇ ಗೊಂದಲವಿಲ್ಲದೆ ಶಾಂತಿಯುತವಾಗಿ ನೆರವೇರಿತು.
PublicNext
13/01/2025 02:23 pm